Friday, February 4, 2011

ಸಮೂಹಮಾಧ್ಯಮಗಳ ಸಾಮಾಜಿಕ ದುಷ್ಪರಿಣಾಮಗಳು

[’ನವಚಿಂತನ’ ಜನವರಿ - ೨೦೧೧ ಸಂಚಿಕೆಯಲ್ಲಿ ಪ್ರಕಟವಾಗಿದೆ]

ಮನುಷ್ಯನು ಸಂಘಜೀವಿ; ಸಮಾಜದೊಡನೆ ಸಂಪರ್ಕದಲ್ಲಿರದೇ ಆತ ಬಾಳಲಾರ. ಪ್ರಪಂಚದ ನಾನಾ ಸ್ಥಳಗಳಲ್ಲಿ ಜರುಗುವ ವಿದ್ಯಮಾನಗಳನ್ನು ತಿಳಿಯಲು ಸದಾ ಉತ್ಸುಕನಾಗಿರುತ್ತನೆ. ಹೀಗಾಗಿ ಸಮಾಚಾರಗಳನ್ನು ಬಿತ್ತರಿಸುವ ಜತೆಗೆ ಮನರಂಜನೆಯನ್ನು ನೀಡುವಂತಹ ಸಮೂಹಮಾಧ್ಯಮಗಳ ಪಾತ್ರ ಮಹತ್ತರದ್ದಾಗಿದೆ. ಇವುಗಳಿಲ್ಲದ ನಾಗರೀಕ ಸಮಾಜವನ್ನು ಊಹಿಸಿಕೊಳ್ಳಲೂ ಅಸಾಧ್ಯವಾಗಿದೆ. ಹೀಗೆ ಸಮಾಜದ ಅವಿಭಾಜ್ಯ ಅಂಗವಾದ ಸಮೂಹಮಾಧ್ಯಮಗಳು ಆರೋಗ್ಯಕರ ವಾತಾವರಣವನ್ನು ಕಾಪಿಡುವಲ್ಲಿ ತಮ್ಮದೇ ಆದ ಮಹತ್ತರ ಜವಾಬ್ದಾರಿಯನ್ನು ಹೊಂದಿವೆ ಎನ್ನುವುದನ್ನು ಮರೆಯಬಾರದು.

ಎಲ್ಲರೂ ತಿಳಿದಂತೆ ಆಕಾಶವಾಣಿ, ವರ್ತಮಾನ ಪತ್ರಿಕೆಗಳು, ದೂರದರ್ಶನ ಹಾಗೂ ಈ ಸಾಲಿಗೆ ಇತ್ತೀಚೆಗೆ ಸೇರಿದ ಅಂತರ್ಜಾಲ [Internet] ಸಮೂಹಮಾಧ್ಯಮಗಳಲ್ಲಿ ಪ್ರಮುಖವಾದವುಗಳು. ಜಗದ ಯಾವುದೇ ಮೂಲೆಯಲ್ಲಿ ನೆಡೆಯುವ ವರ್ತಮಾನವನ್ನು ಕ್ಷಣಾರ್ಧದಲ್ಲಿ ನಮ್ಮೆದುರಿಗೆ ಇವುಗಳು ಪ್ರಸ್ತುತಪಡಿಸುತ್ತವೆ.ಹಾಗಾಗ್ಯೂ ಸಮೂಹಮಾಧ್ಯಮಗಳಲ್ಲಿ ಹೆಚ್ಚಿನವು ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆಯುವಲ್ಲಿ ವಿಫಲವಾಗಿವೆ ಎಂದು ಹೇಳಲು ವಿಷಾದವೆನಿಸುತ್ತಿದೆ.

ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವೃತ್ತಪತ್ರಿಕೆಗಳು ಮಹತ್ತರವಾದ ಪಾತ್ರವಹಿಸಿದ್ದವು. ಅನೇಕ ದೇಶಭಕ್ತರು ತಮ್ಮ ವಿಚಾರಧಾರೆಯನ್ನು ಇವುಗಳ ಮುಖಾಂತರ ಜನತೆಯೆದುರು ತೆರೆದಿಟ್ಟರು. ಇದರಿಂದ ಸ್ಫೂರ್ತಿ ಹೊಂದಿದ ಭಾರತೀಯರು ಹೋರಾಟದಲ್ಲಿ ಭಾಗವಹಿಸಿ ಬಲಿದಾನಗೈದರು. ಮಹಾತ್ಮಾ ಗಾಂಧೀಜಿಯವರ ’ಹರಿಜನ’, ಶ್ರೀ ಗೋಪಾಲಕೃಷ್ಣ ಗೋಖಲೆಯವರ ’ಸ್ವರಾಜ್’, ಮೊದಲಾದ ಪತ್ರಿಕೆಗಳು ಇವುಗಳಲ್ಲಿ ಪ್ರಮುಖವಾದವುಗಳು. ಅವುಗಳನ್ನು ಇಂದಿಗೂ ಪತ್ರಿಕೋದ್ಯಮದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲುಗಳೆಂದು ಪರಿಗಣಿಸಲಾಗುತ್ತಿದೆ. ಇದಲ್ಲದೇ ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ೧೮೯೫ರಲ್ಲಿ ಆರಂಭವಾದ ’ಬ್ರಹ್ಮವಾದಿನ್’ ಪತ್ರಿಕೆ ಮೊದಲಾದ ವುಗಳು ಯುವಕರನ್ನು ಸನ್ಮಾರ್ಗದಲ್ಲಿ ನೆಡೆಯಲು ಪ್ರೇರೇಪಿಸಿದವು. [ಈ ಪತ್ರಿಕೆಯು ಇಂದಿಗೂ ಚೆನ್ನೈನ ಶ್ರೀ ರಾಮಕೃಷ್ಣ ಮಠದಿಂದ ’ದಿ ವೇದಾಂತ ಕೇಸರಿ’ಯೆಂಬ ಹೆಸರಿನಿಂದ ಪ್ರಕಾಶಿತವಾಗುತ್ತಿದೆ.] ಹೀಗೆ ಅನೇಕ ಪತ್ರಿಕೆಗಳು ಅಂದು ದೇಶದ ಭವಿಷ್ಯವನ್ನು ನಿರ್ಮಿಸಲು ತಮ್ಮದೇ ಆದ ಕೊಡುಗೆ ನೀಡಿವೆ.

ಆದರೆ ಇಂದಿನ ಬಹುತೇಕ ಪತ್ರಿಕೆಗಳು ದೇಶವನ್ನು ಮುನ್ನಡೆಸಲು ಬೇಕಾದ ಸತ್ವವನ್ನು ಜನತೆಗೆ ನೀಡುವಲ್ಲಿ ಬಹುತೇಕ ವಿಫಲವಾಗಿವೆಯೆಂದರೆ ತಪ್ಪಾಗಲಾರದು. ಶ್ರೀ ಎ. ಪಿ. ಜೆ. ಅಬ್ದುಲ್ ಕಲಾಂರವರು ತಮ್ಮ ಲೇಖನವೊಂದರಲ್ಲಿ ಬರೆದಿರುವಂತೆ, ನಮ್ಮ ಮಾಧ್ಯಮಗಳು ಋಣಾತ್ಮಕ ವಿಚಾರಗಳನ್ನೇ ಪ್ರಮುಖ ಸುದ್ಧಿಯಾಗಿಸಿಬಿಡುತ್ತವೆ. ಎಲ್ಲೋ ನೆಡೆದ ದರೋಡೆ, ಭ್ರಷ್ಟಾಚಾರ, ಲಂಚಗುಳಿತನ, ರಾಜಕೀಯದ ಪಟ್ಟುಗಳು ಪತ್ರಿಕೆಯ ಪ್ರಧಾನ ಸುದ್ದಿಯಾದರೆ, ರಾಜಸ್ಥಾನದ ಯುವಕನೊಬ್ಬ ವಿದ್ಯುತ್ ರಹಿತ ಶೈತ್ಯಾಗಾರ ನಿರ್ಮಿಸಿದ್ದು, ದೇಶೀಯ ಕ್ರೀಡಾಪಟುಗಳ ದಾಖಲೆಗಳು, ಮಲೆನಾಡಿನ ಮೂಲೆಯಲ್ಲಿ ರೈತನೊಬ್ಬನ ಕೃಷಿವಲಯದ ಸಾಧನೆಗಳು ಒಂದೆರಡು ಸಾಲಿನಲ್ಲಿ ಒಳಪುಟಗಳಲ್ಲಿ ಸ್ಥಾನ ಪಡೆಯುತ್ತವೆ. ಪ್ರತಿದಿನ ಬೆಳಗ್ಗೆ ಎದ್ದು ವಂಚನೆ, ಭೂ-ಹಗರಣ, ರಾಜಕೀಯ ವ್ಯಕ್ತಿಗಳ ಬಾಲಿಶ ಹೇಳಿಕೆಗಳನ್ನು ಓದುತ್ತಾ ಹೋದರೆ, ಸಾಮಾನ್ಯನು ಅವುಗಳಿಂದ ಸ್ಫೂರ್ತಿ ಹೊಂದಲು ಸಾಧ್ಯವೆ? ಈ ಪ್ರಶ್ನೆಗೆ ಪ್ರಜ್ಞಾವಂತ ಪತ್ರಿಕಾ ಮಾಧ್ಯಮ ಪ್ರಾಮಾಣಿಕವಾಗಿ ಉತ್ತರ ಹುಡುಕಬೇಕಿದೆ.

ಇನ್ನು ಸದಭಿರುಚಿಯ ಸುಸಂಸ್ಕಾರಯುತ ಮಾಧ್ಯಮವೆಂದೇ ಬಿಂಬಿತವಾಗಿರುವ ಬಾನುಲಿ[ರೇಡಿಯೋ] ಮಾಧ್ಯಮವೂ ಈ ಸಮಸ್ಯೆಗೆ ಹೊರತಾಗಿಲ್ಲ. ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿದ್ದ ಸಂಗೀತಕಾರ್ಯಕ್ರಮಗಳನ್ನು ಕೇಳುತ್ತಲೇ ಹಿಂದಿನ ತಲೆಮಾರಿನ ಗೀತರಚನೆಕಾರರು, ಸಂಗೀತ ಸಂಯೋಜಕರು ರೂಪುಗೊಂಡಿದ್ದರು. ಅದರಲ್ಲಿ ಪ್ರಸಾರವಾಗುವ ಚಿಂತನ, ಕೃಷಿರಂಗ, ಸಂಗೀತ ಕಾರ್ಯಕ್ರಮಗಳನ್ನು ಆಲಿಸುವುದು ಜನರ ದಿನಚರಿಯಲ್ಲಿ ಹಾಸುಹೊಕ್ಕಾಗಿತ್ತು. ಆಕಾಶವಾಣಿ ಕಲಾವಿದರಿಗೆ ಸಮಾಜದಲ್ಲಿ ಗೌರವ ಲಭಿಸುತ್ತಿತ್ತು. ಸುದೈವವಶಾತ್ ಹಳೆಯ ಆಕಾಶವಾಣಿಯು ತನ್ನ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದಿದ್ದರೂ ಶ್ರೋತೃಗಳು ಅದರಿಂದ [ಇತರ ಮಾಧ್ಯಮಗಳ ಆಕರ್ಷಣೆ, ಒತ್ತಡದಿಂದ ಕೂಡಿದ ಜೀವನಶೈಲಿಯಲ್ಲಿ ಸಮಯವಿಲ್ಲದಿರುವುದೇ ಮೊದಲಾದ ಕಾರಣಗಳಿಂದ]

ವಿಮುಖವಾಗುತ್ತ ಬಂದಿರುವುದು ನಮ್ಮ ದುರದೃಷ್ಟವೆನ್ನೋಣವೇ? ಅದೇ ಮಾಧ್ಯಮದ ಹೊಸ ಅವತರಣಿಕೆಯಾದ ಎಫ್. ಎಂ. ವಾಹಿನಿಗಳು ಜನಪ್ರಿಯವಾಗಿವೆ. ಆದರೆ ಅದರಲ್ಲಿ ಸಂಸ್ಕೃತಿಯನ್ನು ಬಿಂಬಿಸುವ, ಯುವಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವ ಕಾರ್ಯಕ್ರಮಗಳು ಕೇವಲ ಬೆರಳೆಣಿಕೆಯಷ್ಟು ಇರಬಹುದೆಂದು ಹೇಳಲು ವಿಷಾದವಾಗುತ್ತದೆ. ಮನರಂಜನೆಯ ಹೆಸರಿನಲ್ಲಿ ಒಂದು ದೇಶವನ್ನು, ಭಾಷೆಯನ್ನು ಅಥವಾ ಪ್ರಾಂತ್ಯವೊಂದನ್ನು ಹೀಗೆಳೆಯುವ ಬಗ್ಗೆ ಅಲ್ಲಲ್ಲಿ ಅಪಸ್ವರಗಳು ಕೇಳಿಬರುತ್ತಿದೆ. ಆವೇಶದ ಭರದಲ್ಲಿ ಕೆಲವೊಮ್ಮೆ ನಿರೂಪಣೆ ದಿಕ್ಕುತಪ್ಪಿ ಎತ್ತೆತ್ತಲೋ ಜಾರಿಬಿಡುತ್ತದೆ. ಇದು ಅಷ್ಟೊಂದು ಆರೋಗ್ಯಕರ ಬೆಳವಣಿಗೆಯಲ್ಲ.

ಇನ್ನೊಂದು ಪ್ರಮುಖ ಮಾಧ್ಯಮವಾದ ’ಮೂರ್ಖರ ಪೆಟ್ಟಿಗೆ’ಯು ’ಜಾಣರ ಪೆಟ್ಟಿಗೆ’ಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ದೂರದರ್ಶನವು ಸೃಜನಶೀಲತೆಯನ್ನು ಹಾಳುಗೆಡವುತ್ತದೆಯೆಂಬ ಕೂಗು ಬಹುಕಾಲದಿಂದಲೂ ಕೇಳಿಬರುತ್ತಿದೆ. ಇದರಲ್ಲಿ ಬಹುಮಟ್ಟಿಗೆ ಸತ್ಯವೂ ಅಡಗಿದೆ. ಮಕ್ಕಳು ಬಾಲ್ಯಸಹಜ ಆಟಪಾಟಗಳಿಂದ ದೂರವಾಗಿ ದೂರದರ್ಶನದ ಎದುರಿಗೆ ಕುಳಿತಿರುವುದನ್ನು ಎಲ್ಲಾ ಮನೆಗಳಲ್ಲೂ ಕಾಣಬಹುದು. ದೂರದರ್ಶನದೆದುರು ಕುಳಿತು ವೀಕ್ಷಿಸುವಾಗ ನಮ್ಮ ಕ್ರಿಯಾಶೀಲತೆ [Creativity] ಕೆಲಸ ಮಾಡದೇ, ನಿರ್ದೇಶಕರು ನಿರ್ಮಿಸಿದ್ದನ್ನೇ ನಮ್ಮ ಮನಸ್ಸು ಅನುಸರಿಸುತ್ತಾ ಹೋಗುತ್ತದೆ. ಕೆಲವೊಂದು ವಾಹಿನಿಗಳು ರಾಜಕೀಯ ಪಕ್ಷಗಳ ಮುಖವಾಹಿನಿಯಂತೆ ಕೆಲಸ ಮಾಡುವುದನ್ನು ಸಮರ್ಥಿಸಿಕೊಳ್ಳಲಾಗದು. ಕೆಲವೊಮ್ಮೆ ’ಬ್ರೇಕಿಂಗ್ ನ್ಯೂಸ್’ ತಲೆಬರಹದಡಿಯಲ್ಲಿ ಹಳಸಲು ಸುದ್ದಿಯನ್ನೇ ಮತ್ತೆ ಮತ್ತೆ ವರ್ಣರಂಜಿತವಾಗಿ ಪ್ರಸಾರಮಾಡುವುದನ್ನು ನೋಡಿದಾಗ ತಲೆ ಚಿಟ್ಟುಹಿಡಿಯುತ್ತದೆ! ದೂರದರ್ಶನದಲ್ಲಿ ಬಂದಿದ್ದನ್ನೆಲ್ಲಾ ಸತ್ಯವೆಂದು ನಂಬುವ ವೀಕ್ಷಕರಿದ್ದಾರೆ. ಅವರಿಗೆ ಸುಳ್ಳುಸುದ್ದಿಯನ್ನು ನೀಡುವುದು, ತನ್ಮೂಲಕ ಸಮಾಜಕ್ಕೆ ಹಾನಿಯನ್ನುಂಟುಮಾಡುವುದು ಅಕ್ಷಮ್ಯ ಅಪರಾಧವೇ ಸರಿ. ಇದೊಂದು ಸಮಸ್ಯೆಯಾದರೆ, ಅನೇಕ ವಾಹಿನಿಗಳಲ್ಲಿ ಪ್ರಸಾರವಾಗುವ ಕೀಳು ಅಭಿರುಚಿಯ ಕಾರ್ಯಕ್ರಮಗಳು, ಕುಟುಂಬದ ಮೂಲಸತ್ವವನ್ನು ಅಲ್ಲಾಡಿಸುವ ಎಳೆ ಹಿಡಿದುಕೊಂಡು ಸಾಗುವ ಧಾರಾವಾಹಿಗಳು ಸಾಮಾಜಿಕ ಸ್ವಾಸ್ಥ್ಯವನ್ನೇ ಅಲುಗಾಡಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಹಾಗಾಗಿ ’ಹಂಸಕ್ಷೀರ ನ್ಯಾಯ’ದಂತೆ ಒಳ್ಳೆಯದನ್ನು ಸ್ವೀಕರಿಸಿ, ಬೇಡವಾದುದನ್ನು ತ್ಯಜಿಸುವ ವಿವೇಚನೆಯನ್ನು ವೀಕ್ಷಕಪ್ರಭುಗಳು ಹೊಂದಬೇಕು!

ಸಮೂಹಮಾಧ್ಯಮಗಳ ಸಾಲಿಗೆ ಹೊಸದಾಗಿ ಸೇರಿದ, ಜ್ಞಾನಕ್ರಾಂತಿ[Knowledge Revolution]ಯ ಕೂಸು ಅಂತರ್ಜಾಲ. ಇದರ ಸಹಾಯದಿಂದ ಪ್ರಪಂಚವೆಲ್ಲಾ ಒಂದು ಪುಟ್ಟ ಗ್ರಾಮದಂತಾಗಿದೆ. ನಾನಾಖಂಡಗಳ, ವಿವಿಧ ದೇಶಗಳ ಜನರು ಪರಸ್ಪರ ಸಂಪರ್ಕಹೊಂದಲು ಇದು ಒಂದು ಸುಲಭತರ ಮಾಧ್ಯಮವಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ಸಾಲಿನಲ್ಲಿ ಅಂತರ್ಜಾಲವು ಶಾಂತಿ ವಿಭಾಗದಲ್ಲಿ ’ನೋಬೆಲ್’ ಪ್ರಶಸ್ತಿಗೆ ಪರಿಗಣಿತವಾಗಿತ್ತು. ಆದರೆ ಈ ಜಗದಲ್ಲಿ ಯಾವುದೇ ಅಂಶವು ಒಳಿತು ಹಾಗೂ ಕೆಡಕುಗಳೆರಡನ್ನೂ ಹೊಂದಿರುತ್ತದೆಯಷ್ಟೇ? ಅದೇ ರೀತಿ ಅಂತರ್ಜಾಲದಲ್ಲಿಯೂ ಅನೇಕ ನ್ಯೂನ್ಯತೆಗಳನ್ನು ಕಾಣಬಹುದಾಗಿದೆ. ಸಮಾಜವನ್ನು ತಲ್ಲಣಗೊಳಿಸುವ ಅನೇಕ ಊಹಾಪೋಹ[Rumours]ಗಳ ಮೂಲ ಅಂತರ್ಜಾಲವೇ ಆಗಿರುತ್ತದೆ. ಇದರಿಂದ ಕೆಲವೊಮ್ಮೆ ಅನಗತ್ಯ ಗೊಂದಲಗಳು ನಿರ್ಮಾಣವಾಗುತ್ತವೆ. ಇವುಗಳ ಹಿಂದೆ ವಿಕ್ಷಿಪ್ತ ಮನಸ್ಸುಗಳ ಕೈವಾಡ ಅಡಗಿರುತ್ತದೆ. ಇನ್ನು ಕೆಲವು ಹ್ಯಾಕರ್‌[ಅಂತರ್ಜಾಲದ ಮಾಹಿತಿಗೆ ಅನಧಿಕೃತವಾಗಿ ಲಗ್ಗೆಹಾಕಿ ಅಲ್ಲಿಂದ ಅತ್ಯಮೂಲ್ಯ, ರಹಸ್ಯ ಮಾಹಿತಿಗಳನ್ನು ಕದಿಯುವವರು]ಗಳ ಕೈಚಳಕದಿಂದ ರಾಷ್ಟ್ರೀಯ ಹಾಗೂ ವೈಯುಕ್ತಿಕ ಮಾಹಿತಿಗಳಿಗೆ ಧಕ್ಕೆ ಬರುವ ಅಪಾಯವೂ ಎದುರಾಗುತ್ತಿದೆ. ಈಗಿನ ಮಾಹಿತಿ ತಂತ್ರಜ್ಞಾನಯುಗದಲ್ಲಿ ಬಹುತೇಕ ಎಲ್ಲಾ ಮಾಹಿತಿಗಳೂ ಆನ್-ಲೈನ್‌ನಲ್ಲಿ ಲಭ್ಯವಾಗುವುದರಿಂದ ಅವುಗಳ ಸಂರಕ್ಷಣೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಅಂತರ್ಜಾಲ ಜನಿಸಿದ ದೇಶವಾದ ಅಮೆರಿಕಾದಲ್ಲಿಯೇ ವರ್ಷವೊಂದರಲ್ಲಿ ೧೦ ಬಿಲಿಯನ್ ಡಾಲರ್‌ಗಳಿಗೂ ಹೆಚ್ಚು ಹಣ ಸೈಬರ್ ಅಪರಾಧಗಳಿಂದ ದರೋಡೆಯಾಗುತ್ತದೆ ಎಂದು ವರದಿಯೊಂದು ಹೇಳುತ್ತಿದೆ. ಅದೇ ವರದಿಯಲ್ಲಿ ದೇಶದ ಸಾರ್ವಭೌಮತೆಗೆ, ಸಂಸ್ಕೃತಿ, ಮೌಲ್ಯಗಳಿಗೆ ಅಂತರ್ಜಾಲವು ಮಾರಕವಾಗಿದೆ ಎಂಬ ಕಳವಳವೂ ವ್ಯಕ್ತವಾಗಿದೆ. [ಆಧಾರ ಹಾಗೂ ಹೆಚ್ಚಿನ ಮಾಹಿತಿಗೆ ವೀಕ್ಷಿಸಿ: http://www.uscc.gov/researchpapers/2000_2003/pdfs/neg.pdf]. ಹದಿಹರೆಯದವರು ಅಂತರ್ಜಾಲದ ಮುಖ್ಯ ಬಳಕೆದಾರರಾಗಿದ್ದಾರೆ. ವಿವಿಧ ಕೀಳು ಅಭಿವ್ಯಕ್ತಿಯ ಜಾಲತಾಣ[Websites]ಗಳು, ಅಪರಾಧಗಳನ್ನು ರೋಚಕವಾಗಿ ಬಣ್ಣಿಸುವ ಜಾಲತಾಣಗಳು ಮೊದಲಾದವುಗಳು ಯುವಮನಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಅಂತರ್ಜಾಲದಲ್ಲಿಯೇ ಮುಳುಗೇಳುವ ಜನರು ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ವಿಕಸನಕ್ಕೆ ಪೂರಕವಾದ ’ಸಾಹಿತ್ಯಲೋಕ’ದಿಂದ ದೂರವಾಗುತ್ತಿದ್ದಾರೆ. ಮೊದಲೆಲ್ಲಾ ಸ್ನೇಹಿತರನ್ನು ಮುಖತಃ ಭೇಟಿಮಾಡುತ್ತಿದ್ದವರು ಈಗ ಮಿಂಚೋಲೆ[E-mail], ಚಾಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುವ ವಾತಾವರಣ ನಿರ್ಮಿತವಾಗಿದೆ.

ಹೀಗೆ ಪ್ರಮುಖ ಸಮೂಹ ಮಾಧ್ಯಮಗಳ ಸಮಾಜಿಕ ದುಷ್ಪರಿಣಾಮಗಳ ಮೇಲ್ನೋಟವನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ. ಐಸ್‌ಬರ್ಗ್[Iceberg] ತತ್ವದಂತೆ ಈ ಸಮಸ್ಯೆಗಳು ಮೇಲ್ನೋಟಕ್ಕೆ ಇಷ್ಟೇ ಕಂಡರೂ, ಆಳವಾಗಿ ಯೋಚಿಸಿದಾಗ ಇವುಗಳು ನಮ್ಮ ಸಮಾಜವನ್ನು, ಸಂಸ್ಕೃತಿಯನ್ನು, ಪರಂಪರಾಗತ ಮೌಲ್ಯಗಳನ್ನು ಶಿಥಿಲಗೊಳಿಸುವ ಅಪಾಯಗಳು ಇಲ್ಲದಿಲ್ಲ.

ಸದಾ ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಬದಲಾವಣೆಯೊಂದೇ ಶಾಶ್ವತ. ಆದರೆ ಬದಲಾವಣೆಯೊಂದಿಗೆ ಸನಾತನ ಮೌಲ್ಯಗಳನ್ನು ಮಿಳಿತಗೊಳಿಸಿ ಮುಂದೆ ಸಾಗುವ ತುರ್ತು ಅವಶ್ಯಕತೆ ನಮ್ಮ ಸಮಾಜಕ್ಕಿದೆ. “ಎಲ್ಲವೂ ಹಾಳಾಗಿದೆ, ಹಿಂದಿನ ದಿನಗಳೇ ಚೆನ್ನಾಗಿತ್ತು” ಎಂಬ ಸಿನಿಕತನಕ್ಕಿಂತ ನಮ್ಮ ಮುಂದಿನ ಪೀಳಿಗೆಗಾಗಿ ಉತ್ತಮವಾದ ಮೌಲ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ನಾಗರೀಕರಾದ ನಾವೆಲ್ಲರೂ, ಹಾಗೂ ಸಮಾಜದ ಕ್ರಿಯಾಶೀಲತೆಗೆ ಕೈಗನ್ನಡಿಯಾದ ಸಮೂಹಮಾಧ್ಯಮಗಳು ಕಾರ್ಯನಿರ್ವಹಿಸಬೇಕಿದೆ. ’ಪುರಾಣಮಿತ್ಯೇವ ನ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತ್ಯವದ್ಯಮ್’ [ಹಿಂದಿನದೇ ಚೆನ್ನಾಗಿತ್ತು ಎನ್ನುವುದೂ ಸರಿಯಲ್ಲ; ಹೊಸದೆಲ್ಲವೂ ಅಪಕ್ವವಾದುದು ಎಂಬ ವಾದವೂ ಸರಿಯಲ್ಲ] ಎನ್ನುವ ಕಾಳಿದಾಸರ ಸೂಕ್ತಿಯಂತೆ ಹೊಸದರಲ್ಲಿರುವ ಉತ್ತಮ ಅಂಶಗಳನ್ನು ಸ್ವಾಗತಿಸೋಣ. ಈ ಲೇಖನವು ಸಮೂಹ ಮಾಧ್ಯಮಗಳ ಋಣಾತ್ಮಕ ಅಂಶಗಳನ್ನು ಜರಿಯುವುದರತ್ತ ಕೇಂದ್ರೀಕೃತವಾದುದಲ್ಲ; ಆದರೆ ಇವುಗಳ ಹಿಂದಿದ್ದ ಸದಾತ್ಮಕ ಆಶಯವು ಹಳಿತಪ್ಪುತ್ತಿರುವ ಕಳಕಳಿಯನ್ನು ವ್ಯಕ್ತಪಡಿಸುವುದರತ್ತ ಒಲವು ಹೊಂದಿದೆ. ಸಮರ್ಥಸಮಾಜವನ್ನು ರೂಪುಗೊಳಿಸುವತ್ತ ಸಮೂಹಮಾಧ್ಯಮಗಳು ಗಮನಹರಿಸಲಿ; ತನ್ಮೂಲಕ ಸತ್ವಯುತ ಸಮಾಜವನ್ನು ರೂಪುಗೊಳಿಸಲು ಮಾಧ್ಯಮಗಳು ದಾರಿದೀಪಗಳಾಗಲಿ ಎಂದು ಆಶಿಸೋಣ. ಅಲ್ಲವೇ?

**********************************

ಜೈ ಗಾಯತ್ರೀ ದೇವಿ

ಲೇಖಕ:

ಎನ್. ಜಿ. ಪ್ರಭುಪ್ರಸಾದ್, ಶೃಂಗೇರಿ

No comments:

Post a Comment