Sunday, December 9, 2012

ಓಶೋ ಹೇಳಿದ ಒಂದು ಕಥೆ - ಕತ್ತೆಯನ್ನು ನೇತಾರನೆಂದು ಕರೆಯಬಹುದೇ?


[ಕೃಪೆ: ಓಶೋರವರ ’Vedanta: The Ultimate Truth’ ಸದ್ಗ್ರಂಥ]
ಒಮ್ಮೆ ಹೀಗಾಯಿತು ಅಂತ ನಾನು ಕೇಳಿದ್ದೆ. ದೆಹಲಿಯಲ್ಲಿ ಒಬ್ಬರು ಮಹಾನ್ (!) ನೇತಾರರಿದ್ದರು. ಅವರು ಮುಲ್ಲಾ ನಸರುದ್ದೀನ್ ಮೇಲೆ ಒಂದು ದಾವೆ ಹೂಡಿದ್ದರು. ಅವರು ನ್ಯಾಯಾಲಯದಲ್ಲಿ ಹೀಗೆ ಹೇಳಿದರು: “ಈ ಮುಲ್ಲಾ ನಸರುದ್ದೀನ್‌ನು ನನ್ನನ್ನು ಸಾರ್ವಜನಿಕವಾಗಿ ಅಪಮಾನಿಸಿದ್ದಾನೆ. ಇವನು ಎಲ್ಲರೆದುರಿಗೆ ನನ್ನನ್ನು ಕತ್ತೆಯೆಂದು ಕರೆದಿದ್ದಾನೆ.” ಆ ನೇತಾರನು ಪ್ರಬಲನಾಗಿದ್ದವನು. ಹಾಗಾಗಿ ನ್ಯಾಯಾಧೀಶರು ಮುಲ್ಲಾ ನಸರುದ್ದೀನ್‌ನನ್ನು ಕೂಡಲೇ ನ್ಯಾಯಾಲಯಕ್ಕೆ ಕರೆಸಿ ಹೀಗೆ ಹೇಳಿದರು: “ಇದು ಒಳ್ಳೆಯ ಲಕ್ಷಣವಲ್ಲ. ನೀನು ಇದಕ್ಕಾಗಿ ಶಿಕ್ಷೆಯನ್ನನುಭವಿಸಬೇಕಾಗುತ್ತದೆ.”
ಆಗ ನಸರುದ್ದೀನ್ ಹೀಗೆ ಉತ್ತರಿಸಿದನು: “ನನಗೆ ನೇತಾರರನ್ನು ಕತ್ತೆಯೆಂದು ಕರೆಯುವುದು ಅಪರಾಧವೆಂದು ತಿಳಿದಿರಲಿಲ್ಲ. ಹಾಗಾಗಿ ನನ್ನನ್ನು ಈ ಬಾರಿ ಕ್ಷಮಿಸಿಬಿಡಿ. ಈ ತಪ್ಪನ್ನು ನಾನು ಇನ್ನೆಂದೂ ಮಾಡುವುದಿಲ್ಲ.” ಅವನನ್ನು ನ್ಯಾಯಾಲಯವು ಕ್ಷಮಿಸಿತು. ಹಾಗೂ ಅವನ ತಪ್ಪೊಪ್ಪುಗೆಯಿಂದ ನೇತಾರರೂ ಸಮಾಧಾನ ಹೊಂದಿದರು.
ನಂತರ ನಸ್ರುದ್ದೀನ್‍ನು ನ್ಯಾಯಾಧೀಶರನ್ನು ಹೀಗೆ ಕೇಳಿದನು: “ಆದರೆ ಮಹಾಸ್ವಾಮಿ! ನಾನೊಂದು ಕತ್ತೆಯನ್ನು ನೇತಾರರೆಂದು ಕರೆದರೆ ಅದಕ್ಕೆ ನಿಮ್ಮ ಆಕ್ಷೇಪಣೆಯೇನಾದರೂ ಇದೆಯೇ?”
ಅದಕ್ಕೆ ನಕ್ಕು ನ್ಯಾಯಾಧೀಶರು ಹೀಗೆ ಉತ್ತರಿಸಿದರು: “ಇಲ್ಲಾ. ತೊಂದರೆಯೇನೂ ಇಲ್ಲ. ಆದರೆ ಆ ಕತ್ತೆ ನ್ಯಾಯಾಲಯಕ್ಕೆ ಬಂದು ಫಿರ್ಯಾದು ಸಲ್ಲಿಸಬಾರದು ಅಷ್ಟೇ! ಯಾವ ಕತ್ತೆಯೂ ಇದಕ್ಕೆ ಆಕ್ಷೇಪಣೆ ಸಲ್ಲಿಸಲಾರದು. ಹಾಗಾಗಿ ನಿನಗೆ ಇಷ್ಟವಾಗುವಂತಿದ್ದರೆ ಯಾವ ಕತ್ತೆಗೆ ಬೇಕಾದರೂ ನೇತಾರನೆಂದು ಕರೆ. ಅದರ ಬಗ್ಗೆ ನಮದೇನೂ ತಕರಾರಿಲ್ಲ.”
ಇದನ್ನು ಕೇಳಿದ ತಕ್ಷಣ ಮುಲ್ಲಾ ನಸ್ರುದ್ದೀನ್, ಆ ನೇತಾರರ ಕಡೆ ತಿರುಗಿ, ಅಲ್ಲಿ ನೆರೆದವರಿಗೆಲ್ಲಾ ಕೇಳಿಸುವಂತೆ “ನೇತಾರರೇ, ನೀವು ಹೇಗಿದ್ದೀರಿ” ಎಂದು ಕೇಳಿದನು.
-------------------------------------------------------------------------------------------------------------------------------------------------------------------

[http://www.kannadaprabha.com/News.asp?Topic=-123&Title=%AB%DAMV%E6+B%CE%DBo%AB%E6%E0%DE!&ID=KPO20121208223451&nDate=]