Friday, December 9, 2011

ಹಂದಿ ಮತ್ತು ಕುದುರೆ

    ಒಬ್ಬ ಜಮೀನುದಾರನ ಬಳಿ ಅನೇಕ ತಳಿಯ ಕುದುರೆಗಳಿದ್ದವು.  ಬೇರೆ ಬೇರೆ ತರಹದ ಕುದುರೆಗಳನ್ನು ಖರೀದಿಸಿ ಸಂಗ್ರಹಿಸುವುದು ಅವನ ನೆಚ್ಚಿನ ಹವ್ಯಾಸವಾಗಿತ್ತು. ಅವನ ನೆರೆಯವನ ಬಳಿ, ಅವನ ಹತ್ತಿರ ಇರದ,  ಒಂದು ವಿಶೇಷ ಜಾತಿಯ ಕುದುರೆಯಿತ್ತು. ಅದರ ಮೇಲೆ ಅವನ ಕಣ್ಣು ಬಿತ್ತು. ಹಾಗಾಗಿ ನೆರೆಯವನನ್ನು ತುಂಬಾ ಪೀಡಿಸಿ, ಹೆಚ್ಚಿನ ಬೆಲೆ ತೆತ್ತು ಅದನ್ನು ಕೊಂಡುಕೊಂಡನು. ಆದರೆ ದುರ್ದೈವವಶಾತ್ ಕೆಲವೇ ದಿನಗಳಲ್ಲಿ ಆ ಕುದುರೆಯು ಕಾಯಿಲೆ ಬಿತ್ತು. ಆಗ ಅಲ್ಲಿಗೆ ಬಂದು ಪರಿಶೀಲಿಸಿದ ಪಶುವೈದ್ಯರು ಆ ಕುದುರೆಗೆ ವೈರಾಣು ಜ್ವರ   ಬಂದಿದೆಯೆಂದೂ, ಇನ್ನೂ ಮೂರು ದಿನಗಳ ಕಾಲ ಅದರ ಬಗ್ಗೆ ನಿಗಾ ವಹಿಸಬೇಕೆಂದೂ ಜಮೀನುದಾರನರಿಗೆ ತಿಳಿಸಿದರು. ಅಲ್ಲದೇ, ಅಕಾಸ್ಮಾತ್ ಮೂರು ದಿನಗಳಲ್ಲಿ ಅದು ಗುಣಮುಖವಾಗದಿದ್ದಲ್ಲಿ, ಅದರಿಂದ ಬೇರೆ ಕುದುರೆಗಳಿಗೆ ಈ ರೋಗ ದಾಟುವ ಸಂಭವವಿರುವುದರಿಂದ, ಅದನ್ನು ಸಾಯಿಸಬೇಕಾಗುವುದೆಂದೂ ಹೇಳಿದರು. ಅವರಿಬ್ಬರ ಮಾತುಕತೆಯನ್ನು ಅಲ್ಲಿಯೇ ಇದ್ದ ಹಂದಿಯೊಂದು  ಕೇಳಿಸಿಕೊಂಡಿತು.
    ನಂತರ ಅದು ಕುದುರೆಯ ಬಳಿ ಹೋಗಿ ಹೀಗೆಂದಿತು: "ಗೆಳೆಯನೇ ! ಬೇಗ ಹುಶಾರಾಗು. ಇಲ್ಲವಾದಲ್ಲಿ ಅವರು ನಿನ್ನನ್ನು ಕೊಂದುಬಿಡುತ್ತಾರೆ."
      ಮಾರನೆಯ ದಿನ ಮತ್ತೆ ಆ ವೈದ್ಯರು ಬಂದು ಔಷಧಿ ಕೊಟ್ಟು ಹೋದರು. ತರುವಾಯ ಆ ಹಂದಿ ಮತ್ತೆ ಕುದುರೆಯಿದ್ದಲ್ಲಿ ಬಂದು "ಮಿತ್ರಾ.. ನೀನು ಏಳದಿದ್ದಲ್ಲಿ ನಿನ್ನ ಕೊನೆಯಾಗಿಬಿಡುತ್ತದೆ. ಎದ್ದು ಓಡಾಡಲು ಪ್ರಯತ್ನಿಸು. ನಾನು ನಿನಗೆ ಸಹಾಯ ಮಾಡುತ್ತೇನೆ. ಹಾ.. ಈಗ ಏಳು! ಒಂದು, ಎರಡು, ಮೂರು.. ತಯಾರಾಗು." ಎಂದು ಹುರಿದುಂಬಿಸಿತು. ಆದರೆ ಆ ಕುದುರೆಗೆ ಏಳಲು ಸಾಧ್ಯವಾಗಲೇ ಇಲ್ಲ.
     ನಂತರದ ದಿನ ವೈದ್ಯರು ಬಂದಾಗಲೂ ಅದರ ಪರಿಸ್ಥಿತಿಯೇನೂ ಸುಧಾರಿಸಿರಲಿಲ್ಲ. ಹಾಗಾಗಿ ಅವರು "ಇದರಿಂದ ಬೇರೆ ಕುದುರೆಗಳಿಗೆ  ಈ ರೋಗ ಹರಡುವ ಸಂಭವವಿದೆ. ನಾಳೆ ಇದನ್ನು ಸಾಯಿಸಿಬಿಡೋಣ" ಎಂದು ಹೇಳಿ ವಾಪಾಸಾದರು.
      ಅವರು ತೆರಳಿದ ತರುವಾಯ ಅಲ್ಲಿಗೆ ಬಂದ ಹಂದಿ ಕುದುರೆಯನ್ನುದ್ದೇಶಿಸಿ "ಇದು ನಿನ್ನ ಮಾಡು ಇಲ್ಲವೇ ಮಡಿ ಹೋರಾಟ. ಇವತ್ತು ನೀನು ಎದ್ದು ಓಡಾಡದಿದ್ದರೆ, ಇನ್ನೆಂದೂ ನಿನ್ನಿಂದ ಓಡಾಡಲು ಸಾಧ್ಯವಾಗುವುದಿಲ್ಲ. ಹಾ! ಹಾಗೆ ಏಳು! ಪ್ರಯತ್ನಿಸು! ನಿನಗೆ ಇದು ಅಸಾಧ್ಯವೇನಲ್ಲ." ಎಂದು ಪ್ರೋತ್ಸಾಹಿಸಿ, ಆ ಕುದುರೆ ಓಡಾಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ಅಕಸ್ಮಾತ್ತಾಗಿ ಅಲ್ಲಿಗೆ ಬಂದ ಜಮೀನುದಾರನು ಕುದುರೆ ಗುಣಮುಖವಾಗಿರುವುದನ್ನು ಕಂಡು "ಆಹಾ! ಎಂತಹಾ ವಿಸ್ಮಯ.. ನನ್ನ ಕುದುರೆ ಗುಣಮುಖವಾಗಿದೆ. ಇದಕ್ಕಾಗಿ ಒಂದು ಔತಣವನ್ನೇ ಏರ್ಪಡಿಸೋಣ. ಈ ಕೊಬ್ಬಿರುವ ಹಂದಿಯನ್ನೇ ಕಡಿದು ಭರ್ಜರಿ ಭೋಜನ ಮಾಡೋಣ!" ಎಂದು ಉದ್ಗರಿಸಿದನು.

ನೀತಿ: ಇದು ಸಾಧಾರಣವಾಗಿ ಎಲ್ಲಾ ಸಂಸ್ಥೆಗಳಲ್ಲಿ ಜರುಗುವ ವಿದ್ಯಮಾನವಾಗಿದೆ. ಯಾರು ನಿಜವಾಗಿ ಕೆಲಸ ಮಾಡುತ್ತಿದ್ದಾರೆ ಅಥವಾ ಕೆಲಸ ಮಾಡಲು ಸ್ಫೂರ್ತಿ ತುಂಬುತ್ತಿದ್ದಾರೆನ್ನುವುದು ತಿಳಿಯುವುದೇ ಇಲ್ಲ.


[http://www.vijaykarnatakaepaper.com/svww_zoomart.php?Artname=20120718a_011101003&ileft=757&itop=86&zoomRatio=130&AN=20120718a_011101003]
*************************************

[ಮಿಂಚಂಚೆಯಲ್ಲಿ ತೇಲಿಬಂದ ಕಥೆ]

ಸಂಗ್ರಹ: ಪ್ರಭುಪ್ರಸಾದ್ ನಡುತೋಟ, ಶೃಂಗೇರಿ 
[ppsringeri.blogspot.com]

Thursday, April 14, 2011

ಜೀವನದ ಸಾರ್ಥಕತೆ ಕೇವಲ ಸಂಪತ್ತಿನಿಂದಲ್ಲ

[’ನವಚಿಂತನ’ಕ್ಕೆ ಸ್ವೀಕೃತ ಲೇಖನ]

ಸುಗಮವಾದ ಜೀವನವನ್ನು ನೆಡೆಸಲು ಹಣದ ಅವಶ್ಯಕತೆ ಸಾಕಷ್ಟಿದೆ. ಆದರೆ ಇದೊಂದೇ ಸರ್ವಸ್ವವಲ್ಲ. ಬಂಧುವರ್ಗದವರ ಪ್ರೀತಿ, ಸಮಾಜದಲ್ಲಿ ಗೌರವ, ಸದ್ವಿದ್ಯೆಗಳು ನಮ್ಮಲ್ಲಿದ್ದಾಗ ಮಾತ್ರ ಧನ-ಕನಕಗಳು ನಮ್ಮ ಬದುಕಿಗೆ ಶೋಭೆ ನೀಡುತ್ತವೆ. ಅವುಗಳಿಲ್ಲದೇ ಕೇವಲ ’ಧನಾರ್ಜನೆಗಾಗಿಯೇ ನಮ್ಮ ಬದುಕು’ ಎಂದು ತಿಳಿದುಕೊಂಡು, ಸನ್ಮಾರ್ಗಗಳನ್ನಲಕ್ಷಿಸಿ ಅಕ್ರಮ ಸಂಪಾದನೆಯಲ್ಲಿ ತೊಡಗಿ ಹಣವೆಂಬ ಮರೀಚಿಕೆಯ ಹಿಂದೋಡಿದರೆ, ಜೀವನದ ಕೊನೆಗಾಲದಲ್ಲಿ ನಮ್ಮನ್ನು ಶೂನ್ಯವಾವರಿಸುತ್ತದೆ. ಸುಭಾಷಿತಕಾರರೊಬ್ಬರು ಧನಸಂಪಾದನೆಯ ಬಗ್ಗೆ ಈ ರೀತಿ ನುಡಿದಿದ್ದಾರೆ:

ಅರ್ಥಮಾರ್ಜನೇ ದುಃಖಂ ಆರ್ಜಿತಂ ಚ ರಕ್ಷಣೇ|

ಆಯೇ ದುಃಖಂ ವ್ಯಯೇ ದುಃಖಂ ದಿಗರ್ಥಾಃ ಕಷ್ಟಸಂಶ್ರಯಾಃ||

ಧನಸಂಪಾದನೆಯು ಕಷ್ಟಕರವಾದುದು ಹಾಗೆಯೇ ಅದನ್ನು ರಕ್ಷಿಸುವುದೂ ಕಷ್ಟ. ಈ ರೀತಿಯಾಗಿ ಬರುವಾಗಲೂ, ಹೋಗುವಾಗಲೂ ಕಷ್ಟವನ್ನೇ ನೀಡುವ ಧನಸಂಪತ್ತಿಗೆ ಧಿಕ್ಕಾರವಿರಲಿ! ಹೀಗೆ ಸಂಪತ್ತನ್ನು ಶೇಖರಿಸುವುದರಲ್ಲಿ ಇರುವ ಕಷ್ಟಗಳ ಬಗ್ಗೆ ಕವಿಯೊಬ್ಬರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಜೀವನಕ್ಕೆ ಹಣ ಅವಶ್ಯಕವಾದರೂ, ಅದೊಂದೇ ಎಲ್ಲವೂ ಅಲ್ಲ.

ಆಧುನಿಕ ಯುಗದಲ್ಲಿ ಭೋಗಕ್ಕೆ ಪ್ರಾಧಾನ್ಯತೆ ಹೆಚ್ಚಿರುವುದರಿಂದ ಗುಣಕ್ಕೆ ಸಿಗಬೇಕಾದ ಮನ್ನಣೆ ಹಣಕ್ಕೆ ಸಿಗುತ್ತಿದೆ. ವ್ಯಕ್ತಿಯೊಬ್ಬನು ನೈತಿಕವಾಗಿ ಅದೆಷ್ಟೇ ಅಧಃಪತನಕ್ಕಿಳಿದಿರಲಿ, ಅವನು ಧನಿಕನಾಗಿದ್ದರೆ ಸರ್ವಮಾನ್ಯನಾಗಿಬಿಡುತ್ತಾನೆ. ಇದೊಂದು ವಿಪರ್ಯಾಸವೇ ಸರಿ. ಏಕೆಂದರೆ ಮನುಜನ ಜೀವಿತಾವಧಿಯ ಸಾಧನೆಯನ್ನು ಅವನು ಮಾಡಿದ ಸತ್ಕಾರ್ಯಗಳು ಸಾರುತ್ತವೆಯೇ ಹೊರತು ಅವನು ಸಂಪಾದಿಸಿದ ಧನ-ಕನಕಗಳಲ್ಲ. ದಾರ್ಶನಿಕರು ಧನದೆಡೆಗಿನ ವ್ಯಾಮೋಹವನ್ನು ಒಂದು ’ಬಾಯಾರಿಕೆ’ [ತೃಷೆ]ಯೆಂದು ಪರಿಗಣಿಸಿದ್ದಾರೆ. ಆದರೆ ಈ ದಾಹವು ತೀರುವುದೇ ಇಲ್ಲ. ಗಳಿಸಿದಷ್ಟೂ ಇನ್ನೂ ಹೆಚ್ಚು ಬೇಕೆಂದು ಮನಸ್ಸು ಹಾತೊರೆಯುತ್ತದೆಯೇ ಹೊರತು, ಇಷ್ಟು ಸಾಕೆಂದು ಎಂದಿಗೂ ಅನಿಸುವುದಿಲ್ಲ.

ಈ ಅನಿಶ್ಚಿತವಾದ ಪ್ರಪಂಚದಲ್ಲಿ ನಾವ್ಯಾರೂ ಶಾಶ್ವತವಲ್ಲವೆನ್ನುವುದು ಸರ್ವವಿಧಿತ. ಆದರೂ ನಾವು ಚಿರಂಜೀವಿಗಳೆಂದೇ ಭಾವಿಸಿ ಹಣವನ್ನು ಕೂಡಿಡುತ್ತೇವೆ. ಈ ಲೆಕ್ಕಾಚಾರದಲ್ಲಿ ನಮ್ಮ ನೆಮ್ಮದಿಯನ್ನು ಹಾಳುಗೆಡವಿಕೊಂಡಿರುತ್ತೇವೆ; ಎಷ್ಟೋ ಸುಂದರವಾದ ಸಂಬಂಧಗಳು ನಮಗರಿವಿಲ್ಲದಂತೆಯೇ ನಿಧಾನವಾಗಿ ತುಂಡಾಗಿರುತ್ತವೆ. ಜೀವನ ಮಧುರವಾಗುವುದು ನಮ್ಮಲ್ಲಿನ ಸಂಪತ್ತು ಅಧಿಕವಾದಾಗ ಮಾತ್ರವೆಂದು ಭಾವಿಸಿ ’ಬದುಕು ನಮಗೆ ನೀಡುತ್ತಿರುವ ಆನಂದವನ್ನು ಮುಂದೆ ಆಸ್ವಾದಿಸುವ’ ಎಂದು ಜೀವನವನ್ನು ತಳ್ಳುತ್ತೇವೆ. ವಿಪರ್ಯಾಸವೆಂದರೆ, ಹಾಗೆ ಭಾವಿಸಿರುವವರ ತಿಜೋರಿ ತುಂಬುವುದೂ ಇಲ್ಲ; ಅವರ ಜೀವನದಲ್ಲಿ ಆನಂದವೆಂದಿಗೂ ನೆಲೆಸುವುದೂ ಇಲ್ಲ. ಸಂಪತ್ತನ್ನು ಗಳಿಸುವ ಹೋರಾಟಕ್ಕೆ ತಮ್ಮ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ಒಂದು ದಿನ ಮೃತ್ಯುವಿನ ಮನೆಯೆಡೆಗೆ ವಿಷಾದಪೂರ್ವಕವಾಗಿ ತೆರಳುತ್ತಾರೆ. ಬದುಕು ಸುಂದರವಾಗಿ ಅರಳುವುದನ್ನು ಆಸ್ವಾದಿಸಲು ಹಣದ ಅವಶ್ಯಕತೆಯಿಲ್ಲವೆನ್ನುವ ಸರಳ ಸತ್ಯ ಕೊನೆಯವರೆಗೂ ಅವರಿಗೆ ಅರಿವಾಗುವುದೇ ಇಲ್ಲ. ಒಂದು ಸುಮಧುರ ಮುಂಜಾನೆಯ ಸೂರ್ಯೋದಯವನ್ನು ಸವಿಯಲು, ಪಕ್ಷಿಗಳ ಮಂಜುಳಗಾನವನ್ನು ಕೇಳಿಸಿಕೊಳ್ಳಲು, ಶಾಂತವಾಗಿ ನಿಂತಿರುವ ಸರೋವರವೊಂದರ ಚೆಲುವನ್ನು ಆಸ್ವಾದಿಸಲು, ಮುಗ್ಧಮಗುವೊಂದರ ನಿಷ್ಕಲ್ಮಶ ನಗುವನ್ನು ನೋಡಿ ಸಂತಸಪಡಲು, ಸಂಜೆಯ ಸೊಬಗಿನಲ್ಲಿ ನಿರಾತಂಕವಾಗಿ ಹಸಿರು ವನರಾಶಿಯ ನಡುವೆ ನಮ್ಮನ್ನೇ ನಾವು ಮರೆತು ವಿಹರಿಸಲು ಇಲ್ಲಿಯವರೆಗೂ ಭಗವತ್ಕೃಪೆಯಿಂದ ನಮಗ್ಯಾರೂ ಶುಲ್ಕ ವಿಧಿಸಿಲ್ಲ. ಅಲ್ಲವೇ? ಈ ವಿಚಾರದಲ್ಲಿ ನಗರವಾಸಿಗಳು ನಮ್ಮನ್ನು ನೋಡಿ ಅಸೂಯೆಪಡಬಹುದು. ಆದರೂ ’ಮನಸ್ಸಿದ್ದಲ್ಲಿ ಮಾರ್ಗ’ವೆಂಬಂತೆ ದೊಡ್ಡ ಶಹರುಗಳಲ್ಲಿಯೂ ನಮಗೆ ಬೇಕಾದಂತಹ ಪರಿಸರವನ್ನು ಸ್ವಲ್ಪ ಪ್ರಯತ್ನಪಟ್ಟು ಹುಡುಕಿಕೊಳ್ಳಬಹುದಲ್ಲವೇ? ಹೀಗೆ ಕ್ಷಣಕ್ಷಣವೂ ಜೀವಂತಿಕೆಯಿಂದ, ಉತ್ಸಾಹದಿಂದ ಬದುಕುವುದರಲ್ಲಿಯೇ ಭಗವಂತನು ನಮಗೆ ದಯಪಾಲಿಸಿರುವ ಜೀವನದ ಸಾರ್ಥಕತೆ ಅಡಗಿದೆ.

ಇನ್ನು ಬಡತನ, ಸಿರಿವಂತಿಕೆಯೆನ್ನುವುದು ಮನದ ಸ್ಥಿತಿಯೇ ಹೊರತು ಲೌಕಿಕ ಧನಕನಕಗಳಿಂದ ಅಳೆಯುವಂತಹುದಲ್ಲ. ಬಡವರ ಮನೆಯಲ್ಲಿ ಅತಿಥಿಸತ್ಕಾರ, ಸ್ನೇಹ-ವಿಶ್ವಾಸಗಳಿಂದ ಕೂಡಿದ ಜೀವಂತಿಕೆ ಕಂಡುಬಂದರೆ, ಅಯಾಚಿತವಾಗಿ, ಅನ್ಯಮಾರ್ಗಗಳಿಂದ ಸಾಹುಕಾರರಾದವರ ಬಹುತೇಕ ಮನೆಗಳಲ್ಲಿ ಧನದ ದರ್ಪ, ಶ್ರೀಮಂತಿಕೆಯ ಕುಹಕದ ಮಾತುಗಳಿಂದ ಕೂಡಿದ ಉಸಿರುಕಟ್ಟಿಸುವ ವಾತಾವರಣವಿರುತ್ತದೆಯೆಂಬುದು ಬದುಕನ್ನು ಕಂಡವರ ಅಂಬೋಣವಾಗಿದೆ. ಸಜ್ಜನರಾಗಿರುವ ಶ್ರೀಸಾಮಾನ್ಯರ ಬಗ್ಗೆ ಮಹಾಭಾರತದಲ್ಲಿ ಹೀಗೆ ಪ್ರಶಂಸಿಸಲಾಗಿದೆ:

ತೃಣಾನಿ ಭೂಮಿರುದಕಂ ವಾಕ್ಚತುರ್ಥೀ ಚ ಸೂನೃತಾ|

ಏತಾನ್ಯಪಿ ಸತಾಂ ಗೇಹೇ ನೋಚ್ಛಿದ್ಯಂತೇ ಕದಾಚನ||

[ಮಹಾಭಾರತ, ಉದ್ಯೋಗ-೩೬-೩೪]

“ಸಜ್ಜನರ ಮನೆಗಳಲ್ಲಿ ಹುಲ್ಲು [ಚಾಪೆ], ನೆಲ, ನೀರು, ಒಳ್ಳೆಯ ಮಾತುಗಳು – ಈ ನಾಲ್ಕು ಅಂಶಗಳು ಎಂದೆಂದೂ ತಪ್ಪಲಾರವು.” ಹೀಗೆ ಸಜ್ಜನರು ತಮ್ಮಲ್ಲೆಷ್ಟೇ ನೋವುಗಳಿದ್ದರೂ, ಅದರಿಂದ ಬಾಧಿತರಾಗದೇ ಆಗಮಿಸಿದವರನ್ನು ಸತ್ಕರಿಸುವರೆಂಬ ವಿಚಾರವನ್ನಿಲ್ಲಿ ತಿಳಿಸಲಾಗಿದೆ.

’ದುಡ್ಡಿನಿಂದ ಹಾಸಿಗೆಯನ್ನು ಕೊಂಡುಕೊಳ್ಳಬಹುದು, ನಿದ್ರೆಯನ್ನಲ್ಲ’ ಎನ್ನುವುದು ಒಂದು ಲೋಕೋಕ್ತಿ. ಹಣದ ಶಕ್ತಿಗೊಂದು ಮಿತಿಯಿದೆ. ಎಲ್ಲವನ್ನು ಆರ್ಥಿಕ ಲಾಭ-ನಷ್ಟಗಳ ತಕ್ಕಡಿಯಲ್ಲಿ ತೂಗಹೊರಟರೆ ’ಬದುಕುವಿಕೆ’ ಜೀವನವಾಗುವುದಿಲ್ಲ; ಬದಲಿಗೆ ವ್ಯಾಪಾರದಂತಾಗುತ್ತದೆ. ಹಣಸಂಪಾದನೆಗೆಂದು ವಾಮಮಾರ್ಗಗಳನ್ನು ಅನುಸರಿಸುವುದು ತರವಲ್ಲ. ಅದರಿಂದ ಬಹಿರಂಗದಲ್ಲಿ ನಮ್ಮ ಗೌರವ ಹೆಚ್ಚಾದೀತು; ಆದರೆ ಅಂತರಂಗದಲ್ಲಿ ನಮ್ಮ ಅಂತಃಸಾಕ್ಷಿಯೆದುರು ನಾವೇ ಕುಬ್ಜರಾಗುತ್ತಾ ಹೋಗುತ್ತೇವೆ.

ಹೀಗೆ ಹಣವೊಂದೇ ಸರ್ವಸ್ವವಲ್ಲ ಎಂಬ ಅಂಶ ಮನವರಿಕೆಯಾದಾಗ ಆನಂದದಿಂದ ಬಾಳಲು ಸಾಧ್ಯವಾಗುತ್ತದೆ. ಸಂಪತ್ತಿಗೆ ಕೊಡಬೇಕಾದಷ್ಟೇ ಪ್ರಾಧಾನ್ಯತೆಯನ್ನು ನೀಡಿ, ಸನ್ಮಾರ್ಗದಲ್ಲಿ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದರತ್ತ ಮನಮಾಡೋಣ. ಈ ನಿಟ್ಟಿನಲ್ಲಿ ನಮ್ಮೆಲ್ಲರಲ್ಲೂ ಅಡಗಿರುವ ಆ ದಿವ್ಯ ಮಹಾ ಚೇತನವು ನಮ್ಮನ್ನೆಂದಿಗೂ ಪ್ರೇರಿಸುತ್ತಿರಲಿ.

**********************************

ಜೈ ಗಾಯತ್ರೀ ದೇವಿ

ಲೇಖಕ:

ಪ್ರಭುಪ್ರಸಾದ್ ಎನ್. ಜಿ., ಶೃಂಗೇರಿ

Friday, February 4, 2011

ಕರುಣಾಮಯಿ ಜಗದ್ಗುರುಗಳು

[’ಶಂಕರಕೃಪ’ ದಲ್ಲಿ ಪ್ರಕಟ]

||ಶ್ರೀ ಗುರುಭ್ಯೋ ನಮಃ||

ಕರುಣಾಮಯಿ ಜಗದ್ಗುರುಗಳು

ಅಜ್ಞಾನಾಂ ಜಾಹ್ನವೀ ತೀರ್ಥಂ ವಿದ್ಯಾತೀರ್ಥಂ ವಿವೇಕಿನಾಮ್|

ಸರ್ವೇಷಾಂ ಸುಖದಂ ತೀರ್ಥಂ ಭಾರತೀತೀರ್ಥಮಾಶ್ರಯೇ||

ಪ್ರತಿಯೊಬ್ಬ ಶ್ರದ್ಧಾವಂತ ಹಿಂದೂವಿನ ಪಾಲಿಗೆ ಶೃಂಗೇರಿ ಕ್ಷೇತ್ರವು ಪೂಜನೀಯವೆನಿಸಿದೆ. ಇಲ್ಲಿನ ಪ್ರಶಾಂತ ವಾತಾವರಣ, ತಾಯಿ ಶಾರದೆಯ ಅಭಯಹಸ್ತ, ಶ್ರೀಮಠದ ಧಾರ್ಮಿಕ ಪರಿಸರವೆಲ್ಲವೂ ಎಂಥಹವರ ಮನಸ್ಸನ್ನೂ ಮುಗ್ಧಗೊಳಿಸಿ, ಶುದ್ಧ ಮಾಡುತ್ತದೆ. ಇದಕ್ಕೆಲ್ಲದಕ್ಕೂ ಕಳಶವಿಟ್ಟಂತೆ ಶತಮಾನಗಳಿಂದ ಅವಿಚ್ಛಿನ್ನವಾಗಿ ಸಾಗಿಬಂದಿರುವ ಶ್ರೀ ಶಂಕರ ಭಗವತ್ಪಾದರ ಶಿಷ್ಯಪರಂಪರೆಯಲ್ಲಿ ಶೋಭಿಸಿದ ಜಗದ್ಗುರುಗಳೆಲ್ಲರೂ ತಮ್ಮ ತಪಃಶಕ್ತಿ, ವೈರಾಗ್ಯ, ಮನುಕುಲದೆಡೆಗಿನ ಅಪಾರ ಕರುಣೆಯೇ ಮೊದಲಾದ ಮೇರುಸದೃಶ ಗುಣಗಳಿಂದ ಶೃಂಗೇರಿಯ ಸತ್ತ್ವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇದೇ ಪರಂಪರೆಯಲ್ಲಿ ಬಂದಿರುವ ಜಗದ್ಗುರು ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಕರಕಮಲಸಂಜಾತ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಭಕ್ತರಿಗೆ ಸನ್ಮಾರ್ಗವನ್ನು ತೋರುತ್ತಾ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದಲ್ಲಿ ವಿರಾಜಮಾನರಾಗಿದ್ದಾರೆ.

ಸುಸಂಸ್ಕಾರಯುತವಾದ ವೇದವಿದ್ವಾಂಸರ ಮನೆತನದಲ್ಲಿ ಜನಿಸಿದ್ದ ಹಾಗೂ ಬಾಲ್ಯದಿಂದಲೇ ಅಧ್ಯಾತ್ಮದತ್ತ ಅಪಾರ ಒಲವನ್ನು ಹೊಂದಿದ್ದ ಮಹಾಸ್ವಾಮಿಗಳು ಮಹಾಸನ್ನಿಧಾನದ ದಿವ್ಯತೇಜಸ್ಸಿನೆಡೆಗೆ ಆಕರ್ಷಿತರಾದುದು ಸಹಜವೇ ಆಗಿದೆ. ನಂತರ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥರ ಮಾರ್ಗದರ್ಶನದಲ್ಲಿ ಅಪಾರ ಪಾಂಡಿತ್ಯವನ್ನು ಗಳಿಸಿ ‘ಸಕಲನಿಗಮಾಗಮಸಾರಹೃದಯ’ ಬಿರುದಿಗೆ ಅನ್ವರ್ಥರೆನಿಸಿದ್ದಾರೆ. ಘನವಿದ್ವಾಂಸರೂ ಸಹಾ ತಲೆದೂಗುವಂತಹ ಪಾಂಡಿತ್ಯವನ್ನು ಹೊಂದಿಯೂ, ಶ್ರೀ ಸನ್ನಿಧಾನಂಗಳು ಸಾಮಾನ್ಯರ ಅಹವಾಲುಗಳನ್ನು ಕರುಣಾಹೃದಯದಿಂದ ಆಲಿಸಿ, ಅವರಿಗೆ ಅರ್ಥವಾಗುವಂತೆ ಪರಿಹಾರಗಳನ್ನು ಸೂಚಿಸುತ್ತಾರೆ. ಇವರ ಸನ್ನಿಧಿಗೆ ಬಂದ ಭಕ್ತರಾರೂ ನೋವಿನಿಂದ ಹಿಂದಿರುಗುವುದಿಲ್ಲ. ಅವರ ಮನಸ್ಸು ಶ್ರೀ ಶ್ರೀಗಳ ದರ್ಶನ, ಆಶಿರ್ವಾದಗಳಿಂದ ಪುಳಕಿತವಾಗಿರುತ್ತದೆ.

ಶ್ರೀ ಶ್ರೀಗಳ ಧಾರ್ಮಿಕತೆ:

ಶ್ರೀ ಶ್ರೀಗಳ ಧರ್ಮನಿಷ್ಠೆಯು ಭಕ್ತರಿಗೆಲ್ಲರಿಗೂ ತಿಳಿದಿರುವಂತಹದು. ಪ್ರವಾಸದಲ್ಲಿದ್ದಾಗಲೂ ಸಹಾ ಇವರ ದಿನನಿತ್ಯದ ಅನುಷ್ಠಾನವು ಎಂದಿನಂತೆಯೇ ನೆರವೇರುತ್ತದೆ. ಇವರು ನೆರವೇರಿಸುವ ‘ಚಾತುರ್ಮಾಸ್ಯ ವ್ರತ ಸಂಕಲ್ಪ’ಕ್ಕೆ ದೇಶದ ವಿವಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ; ಅಂದು ಶ್ರೀ ಶ್ರೀಗಳು ಕೃಷ್ಣಪಂಚಕ, ವ್ಯಾಸಪಂಚಕ ಹಾಗೂ ಶಂಕರಪಂಚಕಗಳಿಗೆ ಪೂಜೆ ಸಲ್ಲಿಸುವುದನ್ನು ದರ್ಶಿಸಿ ಕೃತಾರ್ಥರಾಗುತ್ತಾರೆ. ಚಾತುರ್ಮಾಸವು ‘ಉಮಾಮಹೇಶ್ವರ ವ್ರತ’ದೊಂದಿಗೆ ಸಂಪೂರ್ಣಗೊಳ್ಳುತ್ತದೆ. ಸ್ವಾಮಿಗಳು ಮಹಾಶಿವರಾತ್ರಿಯಂದು ರಾತ್ರಿಯಿಡೀ ಪೂಜೆಮಾಡಿ ಲೋಕಕಲ್ಯಾಣಕ್ಕಾಗಿ ಪರಶಿವನಲ್ಲಿ ಪ್ರಾರ್ಥಿಸುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಚಂದ್ರಮೌಳೀಶ್ವರನ ಸನ್ನಿಧಿಯಲ್ಲಿ ಪ್ರತೀ ಜಾವದಲ್ಲಿಯೂ ನೆರವೇರುವ ಶ್ರೀ ಶ್ರೀಗಳ ಪೂಜೆ, ವೇದವಿದ್ವಾಂಸರ ರುದ್ರ ಮತ್ತಿತರ ಮಂತ್ರಗಳ ಪಠಣ – ಇವುಗಳು ಆಸ್ತಿಕರ ಭಕ್ತಿಭಾವವು ದೃಢವಾಗುವಂತೆ ಮಾಡಿ, ಈ ಸನ್ನಿಧಿಯೇ ಭೂಕೈಲಾಸವೇನೋ ಎಂದು ತೋರುವಂತೆ ಮಾಡುತ್ತದೆಯೆಂದರೆ ಅದು ಉತ್ಪ್ರೇಕ್ಷೆಯಾಗಲಾರದು. ಶ್ರೀ ಶ್ರೀಗಳು ವಿಶೇಷ ದಿನಗಳಲ್ಲಿ ಖುದ್ದಾಗಿ ತೆರಳಿ ಪೂಜೆ ಸಲ್ಲಿಸುತ್ತಾರಲ್ಲದೇ, ಶೃಂಗೇರಿಯಲ್ಲಿರುವಾಗ ಪ್ರತೀ ಶುಕ್ರವಾರದ ದಿನದಂದು ತಾಯಿಯ ಸನ್ನಿಧಿಯನ್ನು ದರ್ಶಿಸುತ್ತಾರೆ. ಲೋಕಕಲ್ಯಾಣಾರ್ಥವಾಗಿ ಸಂಸ್ಥಾನದಲ್ಲಿ ಅತಿರುದ್ರ, ಸಹಸ್ರಚಂಡಿಯೇ ಮೊದಲಾದ ಯಾಗಗಳು ಶ್ರೀ ಶ್ರೀಗಳ ಮಾರ್ಗದರ್ಶನದಲ್ಲಿ ಆಗಾಗ ಜರುಗುತ್ತಿರುತ್ತವೆ. ಅತಿವೃಷ್ಟಿ ಅಥವಾ ಅನಾವೃಷ್ಟಿಯಂಥಹಾ ಪ್ರಕೃತಿವಿಕೋಪಗಳು ಸಂಭವಿಸಿದಾಗ ಜಗದ್ಗುರುಗಳು ಪ್ರಾರ್ಥನೆ ಸಲ್ಲಿಸಿದ ಕೂಡಲೇ ಅವುಗಳು ಶಮನವಾಗುವುದನ್ನು ಸ್ಥಳೀಯರು ಅನೇಕ ಬಾರಿ ಕಂಡಿದ್ದಾರೆ. ತಪೋವನವಾದ ನರಸಿಂಹವನದಲ್ಲಿ ಶ್ರೀ ಶ್ರೀಗಳ ವಾಸ್ತವ್ಯವಿರದಿದ್ದಾಗ ಅಲ್ಲಿನ ಕಳೆಯೇ ಮಂಕಾಗಿರುತ್ತದೆಯೆಂದು ನಮ್ಮ ನೆರೆಮನೆಯ ಹಿರಿಯರೊಬ್ಬರು ಆಗಾಗ ಹೇಳುತ್ತಿರುತ್ತಾರೆ!

ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದುರ್ಗಾದೇವಸ್ಥಾನ, ಮಲಹಾನಿಕರೇಶ್ವರ ರಥೋತ್ಸವಗಳ ಸಂದರ್ಭಗಳಲ್ಲಿ ಆಸ್ತಿಕರ ಉತ್ಸಾಹ, ಶ್ರದ್ಧಾ-ಭಕ್ತಿಗಳು ದಟ್ಟವಾಗಿ ಮೇಳೈಸಿರುತ್ತವೆ. ಅದಕ್ಕೆ ಕಾರಣವೆಂದರೆ ಶ್ರೀ ಶ್ರೀಗಳು ಸ್ವಯಂ ಈ ಪವಿತ್ರ ಸಂದರ್ಭಗಳಲ್ಲಿ ಅಲ್ಲಿಗೆ ಆಗಮಿಸಿ, ಅವುಗಳು ಸಂಪೂರ್ಣವಾಗುವವರೆಗೂ ಅಲ್ಲಿದ್ದು, ಅವುಗಳ ದಿವ್ಯತೆಯನ್ನು ಇನ್ನಷ್ಟು ಹೆಚ್ಚಿಸುವುದೇ ಆಗಿದೆ. ಸಾವಿರಾರು ಜನರು ಭಾಗವಹಿಸಿಯೂ ಸಹಾ ಇದುವರೆಗೆ ಈ ಸಂದರ್ಭಗಳಲ್ಲಿ ಯಾವುದೇ ಅನಾಹುತಗಳು ಸಂಭವಿಸದೇ, ಎಲ್ಲವೂ ಅಚ್ಚುಕಟ್ಟಾಗಿ ಜರುಗಿವೆಯೆಂಬುದು ಶೃಂಗೇರಿಯ ನಾಗರೀಕರೆಲ್ಲರ ಪಾಲಿಗೆ ಹೆಮ್ಮೆಯ ವಿಷಯವೇ ಸರಿ.

ಹರಿಹರಾದಿ ದೇವತೆಗಳೆಲ್ಲರೂ ಪರಬ್ರಹ್ಮದ ಸ್ವರೂಪವೆಂದೇ ಪರಿಗಣಿತವಾಗಿರುವ ಶ್ರೀ ಕ್ಷೇತ್ರದಲ್ಲಿ ಮಹಾಶಿವರಾತ್ರಿಯು ನೆರವೇರಿದಷ್ಟೇ ಶ್ರದ್ಧಾ-ಭಕ್ತಿಗಳಿಂದ ಶ್ರೀ ಕೃಷ್ಣಜನ್ಮಾಷ್ಟಮಿ, ಶ್ರೀ ರಾಮನವರಾತ್ರಿ ಮೊದಲಾದವುಗಳು ಆಚರಿಸಲ್ಪಡುತ್ತವೆ. ಇವೆಲ್ಲಾ ವಿಶೇಷ ಸಂದರ್ಭಗಳಲ್ಲೂ ಶ್ರೀ ಶ್ರೀಗಳು ವಿಶೇಷ ಪೂಜೆಗಳನ್ನಾಚರಿಸಿ, ಸನಾತನ ಧರ್ಮದ ಬಗ್ಗೆ ಧಾರ್ಮಿಕರಲ್ಲಿ ಹೆಚ್ಚಿನ ಶ್ರದ್ಧೆಯು ನೆಲೆಸುವಂತೆ ಮಾಡುತ್ತಿದ್ದಾರೆ.

ಕೆಲವೊಂದು ಪೀಠಗಳಲ್ಲಿ ಹಿಂದಿನ ಜಗದ್ಗುರುಗಳು ಬ್ರಹ್ಮೈಕ್ಯರಾಗಿ ಅವುಗಳಿಗೆ ಉತ್ತರಾಧಿಕಾರಿಯಿಲ್ಲವಾದ ಪರಿಸ್ಥಿತಿಯುಂಟಾಗಿತ್ತು. ಆಗ ಶ್ರೀ ಶ್ರೀಗಳು ಅಲ್ಲಿಗೆ ಸಮರ್ಥರಾದ ಪೀಠಾಧಿಪತಿಗಳನ್ನು ಆಯ್ಕೆ ಮಾಡಿ, ಅವಶ್ಯಕತೆಯಿದ್ದಲ್ಲಿ ಅವರಿಗೆ ಹೆಚ್ಚಿನ ವೇದಾಂತ ವಿಚಾರಗಳನ್ನು ಅರಿಯಲು ಅನುವು ಮಾಡಿಸಿಕೊಟ್ಟು, ಧರ್ಮಕ್ಕೆ ಚ್ಯುತಿಬಾರದಂತೆ ವ್ಯವಸ್ಥೆಗೊಳಿಸಿದ್ದರು. ಅಲ್ಲೆಲ್ಲಾ ಶ್ರೀ ಶ್ರೀಗಳು ಸೂಚಿಸಿರುವ ಗುರುವರ್ಯರು ಆಯಾ ಪೀಠಗಳ ಪರಂಪರೆಗನುಗುಣವಾಗಿ ಧರ್ಮವನ್ನಾಚರಿಸುತ್ತಾ, ಶಿಷ್ಯವೃಂದಕ್ಕೆ ಸರಿದಾರಿ ತೋರುತ್ತಿರುವುದು ಜನಜನಿತವಾದ ವಿಚಾರ. ಇದು ಜಗದ್ಗುರುಗಳು ಧರ್ಮದ ಬಗೆಗೆ ಇರಿಸಿರುವ ಕಾಳಜಿಯನ್ನು ತೋರಿಸಿಕೊಡುತ್ತಿದೆ.

ಶತಮಾನದ ಇತಿಹಾಸವಿರುವ ಸದ್ವಿದ್ಯಾಸಂಜೀವಿನಿ ಸಂಸ್ಕೃತ ಪಾಠಶಾಲೆಯಲ್ಲಿ ಕಲಿತ ವಿದ್ವಾಂಸರಿಗೆ ದೇಶದೆಲ್ಲೆಡೆಯಲ್ಲಿ ಮನ್ನಣೆಯಿದೆ. ಇಲ್ಲಿನ ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ಮಹಾಸ್ವಾಮಿಗಳೇ ಆಗಾಗ ಪರೀಕ್ಷಿಸುತ್ತಿರುತ್ತಾರೆ. ಲೌಕಿಕ ವಿದ್ಯೆಯನ್ನು ಕಲಿಯಲು ಸಹಾ ಸಂಸ್ಥಾನದಿಂದ ಅರ್ಹ ವಿದ್ಯಾರ್ಥಿಗಳಿಗೆ ನೆರವನ್ನು ನೀಡಲಾಗುತ್ತದೆ. ಇನ್ನು ಮಠದ ನೌಕರರ ಮಕ್ಕಳೆಲ್ಲರೂ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ವೀಣಾಪಾಣಿಯಾದ ತಾಯಿ ಶಾರದೆಯ ಕೃಪೆಯಿಂದ ಸುಸಂಸ್ಕೃತರಾಗಿ ಕಲಿಕೆಯಲ್ಲೆಂದೂ ಹಿಂದೆಬೀಳದೆ, ದೇಶ-ವಿದೇಶಗಳಲ್ಲಿ ಸಾಧನೆಗೈದಿದ್ದಾರೆ.

ಶ್ರೀ ಶ್ರೀಗಳ 59ನೇ ವರ್ಧಂತಿಯ ಸಂದರ್ಭದಲ್ಲಿ ಹೊರಬಂದ ‘ಶಂಕರಕೃಪಾ’ದ ವಿಶೇಷಾಂಕದಲ್ಲಿ ಜಗದ್ಗುರುಗಳ ಮಹಿಮೆಯನ್ನು ಶ್ರೀ ಮಠದ ಆಡಳಿತಾಧಿಕಾರಿಗಳಾದ ಶ್ರೀ ಡಾ. ವಿ. ಆರ್. ಗೌರೀಶಂಕರ್ ರವರು ಹೀಗೆ ಬಣ್ಣಿಸಿದ್ದಾರೆ: “ಶ್ರೀ ಶಂಕರ ಭಗವತ್ಪಾದರು ‘ಆಸೇತು ಹಿಮಾಚಲ’ದವರೆಗೆ ಸಂಚರಿಸಿ, ಧರ್ಮಪ್ರತಿಷ್ಠಾಪನಾಚಾರ್ಯರಾದುದನ್ನು ಕೇಳಿಬಲ್ಲೆವು. ಅಂತೆಯೇ ಧರ್ಮಪ್ರತಿಷ್ಠಾಪನೆಗಾಗಿ ಜಗದ್ಗುರುಗಳವರು ದಿಗ್ವಿಜಯ ಯಾತ್ರೆ ಕೈಗೊಂಡು ಭಾರತದ ಉದ್ದಗಲಕ್ಕೆ ಸಂಚರಿಸಿದ್ದಾರೆ. ಸನಾತನ ಸಂಸ್ಕೃತಿಯನ್ನು ಬೆಳಸಿದ್ದಾರೆ. ಅವರ ಪಾಂಡಿತ್ಯಕ್ಕೆ ಪಂಡಿತಸಮೂಹವೇ ತಲೆದೂಗುತ್ತದೆ. ಸಂಸ್ಕೃತದಲ್ಲಿ ಮಾತ್ರವಲ್ಲದೇ ಇತರ ಭಾರತೀಯ ಭಾಷೆಗಳಲ್ಲಿ ಅವರ ಪ್ರವಚನ ವಾಗ್ವೈಖರಿಯು ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಶ್ರೀಮಠೀಯ ಕಾರ್ಯಗಳಿಗೆ ಶ್ರೀ ಶ್ರೀಗಳವರ ಅನುಗ್ರಹವೇ ರಕ್ಷಾಕವಚ. ಅವರ ಅನುಗ್ರಹದಿಂದ ಎಷ್ಟೋ ಮಹತ್ತರ ಕಾರ್ಯಗಳು ಸುಲಭವಾಗಿ ಈಡೇರಿವೆ.”

ಶ್ರೀ ಶ್ರೀಗಳ ದರ್ಶನಕ್ಕೆ ಅನೇಕ ಕಡೆಗಳಿಂದ ವಿವಿಧ ಮತಗಳ ಗುರುಗಳು ಆಗಾಗ ಆಗಮಿಸುತ್ತಿರುತ್ತಾರೆ. ಅವರೊಡನೆ ಶ್ರೀ ಶ್ರೀಗಳು ಪ್ರಸ್ತುತ ಧರ್ಮವು ಎದುರಿಸುತ್ತಿರುವ ಸವಾಲುಗಳು, ಅವುಗಳಿಗೆ ಒದಗಿಸಬಹುದಾದ ಪರಿಹಾರಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸುತ್ತಾರೆ. ಅನೇಕ ವರ್ಷಗಳ ಹಿಂದೆ ಶೃಂಗೇರಿಯಲ್ಲಿ ಜರುಗಿದ ಅದ್ವೈತ ಯತಿ ಸಮ್ಮೇಳನದ ಯಶೋಗಾಥೆಯನ್ನಿಲ್ಲಿ ಸ್ಮರಿಸಬಹುದಾಗಿದೆ.

ವಸುಧೈವ ಕುಟುಂಬಕಮ್:

ಜಗದ್ಗುರುಗಳು ಯಾರನ್ನೂ ದೂರವಿಡುವುದಿಲ್ಲ; ನೊಂದ ಭಕ್ತರ ಸಮಸ್ಯೆಗಳನ್ನಾಲಿಸಿ, ಅವುಗಳಿಗೆ ಸಮರ್ಪಕ ಪರಿಹಾರವನ್ನೊದಗಿಸಿ ಮಾರ್ಗದರ್ಶನ ನೀಡುತ್ತಾರೆ. ಎಷ್ಟೋ ಭಕ್ತರು ಮಹಾಸ್ವಾಮಿಗಳ ಅನುಗ್ರಹದಿಂದ ಅನೇಕ ಕಂಟಕಗಳಿಂದ, ಬಹುಕಾಲದಿಂದ ಅವರ ಮನಸ್ಸನ್ನು ಹಿಂಡುತ್ತಿದ್ದ ಯಾತನೆಗಳಿಂದ ಪಾರಾಗಿರುವ ಅನುಭವಗಳನ್ನು ಕೇಳಿದ್ದೇನೆ. ಆಧ್ಯಾತ್ಮಿಕ ಶಾಂತಿಯನ್ನರಸಿ ಬಂದ ವಿದೇಶಿ ಭಕ್ತರೊಬ್ಬರು ಶೃಂಗೇರಿಯಲ್ಲಿಯೇ ಬಹುವರ್ಷಗಳಿಂದ ನೆಲೆಸಿ, ಜಗದ್ಗುರುಗಳ ನಿವಾಸವಾದ ನರಸಿಂಹವನದಲ್ಲಿ ಮೌನವಾಗಿ ಸಾಧನಾನಿರತರಾಗಿರುವುದನ್ನು ನಾವಿಂದಿಗೂ ನೋಡಬಹುದು! ಶ್ರೀ ಶ್ರೀಗಳ ತಪಃಶಕ್ತಿಗೆ, ಅವರ ಕರುಣಾ ಹೃದಯಕ್ಕೆ ಸನಾತನ ಧರ್ಮೀಯರಲ್ಲದವರೂ ಮಾರುಹೋಗಿದ್ದಾರೆ. ದೇಶದಲ್ಲಿ ಕೋಮುದಳ್ಳುರಿ ಹೊತ್ತಿ ಉರಿಯುತ್ತಿರುವ ಈ ಕಾಲದಲ್ಲಿ ಸಹಾ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವವು ನಮ್ಮ ಪೂಜಾಮಂದಿರದವರೆಗೂ ಎಂದಿನಂತೆ ಚಿತ್ತೈಸಬೇಕೆಂದು ಬೇರೊಂದು ಧರ್ಮದ ಮುಖಂಡರು ಭಿನ್ನವಿಸಿಕೊಂಡಂತಹಾ ಘಟನೆಯೊಂದು ಇಲ್ಲಿ ಜರುಗಿದೆಯೆಂಬ ವಿಷಯವು ಹೆಚ್ಚಿನವರಿಗೆ ತಿಳಿಯದು.

‘ಅನುಗ್ರಹ ಸಂದೇಶ’ವೊಂದರಲ್ಲಿ ಮಾನವಜನ್ಮವನ್ನು ಸಾರ್ಥಕಪಡಿಸಿಕೊಳ್ಳುವಂತೆ ಜಗದ್ಗುರುಗಳು ಹೀಗೆ ಅಪ್ಪಣೆ ಕೊಡಿಸಿದ್ದಾರೆ: “ಕಾಮಧೇನು ಹಸುವು ತನ್ನ ಒಡೆಯನ ಎಲ್ಲಾ ಆಸೆಗಳನ್ನೂ ಈಡೇರಿಸುತ್ತದೆ. ಅಂತಹ ಕಾಮಧೇನುವನ್ನು ಪಡೆದವನು ಒಂದು ದಿನ ತನ್ನ ಗಾಡಿಯ ಎತ್ತು ಸಿಗಲಿಲ್ಲವೆಂಬ ಕಾರಣದಿಂದ ಕಾಮಧೇನುವನ್ನು ನೆಲವನ್ನು ಊಳಲು ಉಪಯೋಗಿಸಿದರೆ ಅಂತಹ ಮೂರ್ಖನ ಬಗ್ಗೆ ಹೇಳುವುದೇನು? ಹಾಗೆಯೇ ಪುಣ್ಯಕರ್ಮಗಳನ್ನು ಮಾಡಲು ಈ ಮಾನವ ಜನ್ಮವನ್ನು ಉಪಯೋಗಿಸದಿರುವವನೂ ಮೂರ್ಖನೇ. ಆದ್ದರಿಂದ ಮಾನವಜನ್ಮವನ್ನು ಪಡೆಯುವುದೇ ದುರ್ಲಭ ಎನ್ನುವುದಾದರೆ, ಅದನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತೂ ಕಷ್ಟಕರ.”

ಪಶು-ಪಕ್ಷಿಗಳೆಡೆಗೂ ಕರುಣೆ:

ಜಗದ್ಗುರುಗಳ ನಿವಾಸವಾದ ನರಸಿಂಹವನದಲ್ಲಿ ಜಿಂಕೆಗಳು, ಹಸುಗಳು, ಪಾರಿವಾಳಗಳು, ನವಿಲುಗಳೇ ಮೊದಲಾದ ಪ್ರಾಣಿ-ಪಕ್ಷಿಗಳು ನಿರ್ಭೀತವಾಗಿ ಸಂಚರಿಸಿಕೊಂಡಿರುವುದನ್ನು ನೋಡಬಹುದು. ತಮ್ಮ ಅವಿರತ ಅನುಷ್ಠಾನಗಳ ನಡುವೆಯೂ ಶ್ರೀ ಸನ್ನಿಧಾನಂಗಳವರು ಗೋಶಾಲೆ, ಗಜಶಾಲೆ ಹಾಗೂ ಅಶ್ವಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಜೀವಿಗಳ ಯೋಗಕ್ಷೇಮದ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ. ಅಲ್ಲಿ ಕರುವೊಂದು ಜನಿಸಿದ್ದನ್ನು ಕಂಡರೆ ಸಂತಸದಿಂದ ಅದರ ಮೈದಡವುತ್ತಾರೆ. ಜಿಂಕೆಮರಿಗಳಂತೂ ಶ್ರೀ ಶ್ರೀಗಳ ಸನಿಹದಲ್ಲೇ ಇರುತ್ತವೆ. ಕೆಲವರ್ಷಗಳ ಹಿಂದೆ ಮಠದಲ್ಲಿ ಸ್ವಲ್ಪ ಹಾವಳಿ ನೆಡೆಸಿದ ‘ಕರ್ಣ’ ಆನೆಯನ್ನು ಕಳುಹಿಸಬೇಕಾದ ಸಂದರ್ಭದಲ್ಲಿ ಲಾರಿಯನ್ನು ಹತ್ತದೇ, ಅದನ್ನೂ ಜಖಂಗೊಳಿಸಿ ಅದು ಅಲ್ಲಿದ್ದ ಸಿಬ್ಬಂದಿಗಳ ಮೇಲೂ ದಾಳಿ ನೆಡೆಸುವುದರಲ್ಲಿತ್ತು. ಇದನ್ನು ತಿಳಿದ ಮಹಾಸ್ವಾಮಿಗಳು ಅದಕ್ಕೆ ಸೇಬುಹಣ್ಣೊಂದನ್ನು ನೀಡಿ, ಮಕ್ಕಳಿಗೆ ತಿಳಿಹೇಳುವಂತೆ ಸಮಾಧಾನಗೊಳಿಸಿ, ಕಾಲಭೈರವನ ಅರ್ಚನಾ ಪ್ರಸಾದವನ್ನು ನೀಡಿ, ಅದನ್ನು ಮನಸ್ಸಿಲ್ಲದ ಮನಸ್ಸಿನಿಂದಲೇ ಬೀಳ್ಕೊಟ್ಟಿದ್ದನ್ನು ನರಸಿಂಹವನದ ನಿವಾಸಿಗಳು ಇಂದಿಗೂ ಸ್ಮರಿಸುತ್ತಾರೆ.

ಹೀಗೆ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥರು ಭಕ್ತಜನಚಿತ್ತಾಪಹಾರಕರಾಗಿ, ಸಮಸ್ತಜೀವಿಗಳ ಕಲ್ಯಾಣವನ್ನೇ ಬಯಸುತ್ತಾ, ಸರ್ವರನ್ನೂ ಅನುಗ್ರಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆದಿಗುರು ಶ್ರೀ ಶಂಕರರು ರಚಿಸಿದ ‘ಧನ್ಯಾಷ್ಟಕ’ದ ಶ್ಲೋಕವೊಂದು ನೆನಪಿಗೆ ಬರುತ್ತಿದೆ. ಅದೆಂದರೆ:

ಶಾಂತೈರನನ್ಯ ಮತಿಭಿರ್ಮಧುರ ಸ್ವಭಾವೈ-

ರೇಕತ್ವ ನಿಶ್ಚಿತ ಮನೋಭಿರಪೇತ ಮೋಹೈಃ|

ಸಾಕಂ ವನೇಷು ವಿದಿತಾತ್ಮಪದ ಸ್ವರೂಪೈ-

ಸ್ತದ್ವಸ್ತು ಸಮ್ಯಗನಿಶಂ ವಿಮೃಶಂತಿ ಧನ್ಯಾಃ||

[ಧನ್ಯಾಷ್ಟಕಮ್, ಶ್ಲೋ - 8]

“ಶಾಂತಾತ್ಮರೂ, ಸ್ಥಿತಪ್ರಜ್ಞರೂ, ಮಧುರಸ್ವಭಾವದವರೂ, ಏಕಮೇವಾದ್ವಿತೀಯ ಪರಬ್ರಹ್ಮವಸ್ತುವಿನಲ್ಲಿ ಮನಸ್ಸನ್ನು ನೆಟ್ಟವರೂ, ಮೋಹರಹಿತರೂ, ಆತ್ಮದ ಸ್ವರೂಪದ ಬಗ್ಗೆ ಜ್ಞಾನವನ್ನು ಹೊಂದಿದವರೂ ಆದ ಜ್ಞಾನಿಗಳೊಡನೆ ವನಪ್ರದೇಶಗಳಲ್ಲಿ ಸದಾ ಆತ್ಮತತ್ತ್ವವಿಚಾರವನ್ನು ಮಾಡುತ್ತಿರುವವರೇ ಸಾರ್ಥಕ ಬಾಳುವೆಯನ್ನು ನೆಡೆಸುತ್ತಿರುವವರು.” ಈ ಶ್ಲೋಕಕ್ಕೆ ಜೀವಂತ ಉದಾಹರಣೆಯಾಗಿ ಜಗದ್ಗುರುಗಳು ಶೃಂಗೇರಿ ಶಾರದಾಪೀಠದಲ್ಲಿ ಶೋಭಿಸುತ್ತಿದ್ದಾರೆ.

ಮಹಾಸನ್ನಿಧಾನಂಗಳವರ ಸನ್ನಿಧಿಯ ಬಳಿಯಲ್ಲಿ ಅನೇಕ ಸಂವತ್ಸರಗಳ ನೆಲೆಸುವ ಭಾಗ್ಯಲಭಿಸಿದ ಈ ಕಿರಿಯನ ಕಣ್ಣಿಗೆ ಕಂಡ ಕೆಲಹೊಳಹುಗಳಿವು. ಇವರ ದಿವ್ಯವ್ಯಕ್ತಿತ್ವವನ್ನು ಈ ಕಿರುಲೇಖನದಲ್ಲಿ ವಿವರಿಸತೊಡಗಿದರೆ, ಸಾಗರದ ಸೀಮೆಯನ್ನರಿಯಲು ತೆಪ್ಪದಲ್ಲಿ ಹೊರಟಂತಾದೀತು! ಇಂಥಹಾ ಮಹಾತ್ಮರ 60ನೇ ವರ್ಧಂತಿಯ ಸಂದರ್ಭದಲ್ಲಿ ಶ್ರೀ ಶಾರದಾಚಂದ್ರಮೌಳೀಶ್ವರರ ಕೃಪೆ, ಶ್ರೀ ಶ್ರೀಗಳ ಅನುಗ್ರಹ ನಮ್ಮ ಮೇಲೆ ನಿರಂತರವಾಗಿದ್ದು, ನಮ್ಮ ಧರ್ಮನಿಷ್ಠೆಯು ವೃದ್ಧಿಯಾಗಲೆಂದು ಪ್ರಾರ್ಥಿಸೋಣ. ಅಲ್ಲವೇ?

[ಸಲಹೆ-ಸಹಕಾರ: ಶ್ರೀ ವೆಂಕಟೇಶ ಭಟ್, ಬೆಂಗಳೂರು ಶಂಕರ ಮಠ; ಶ್ರೀ ಎನ್.ಎಂ. ಗೋಪಾಲಕೃಷ್ಣ, ನರಸಿಂಹವನ]

**********************************

ಜೈ ಗಾಯತ್ರೀ ದೇವಿ

ಲೇಖಕ:

ಎನ್. ಜಿ. ಪ್ರಭುಪ್ರಸಾದ್, ಶೃಂಗೇರಿ

ಸಮೂಹಮಾಧ್ಯಮಗಳ ಸಾಮಾಜಿಕ ದುಷ್ಪರಿಣಾಮಗಳು

[’ನವಚಿಂತನ’ ಜನವರಿ - ೨೦೧೧ ಸಂಚಿಕೆಯಲ್ಲಿ ಪ್ರಕಟವಾಗಿದೆ]

ಮನುಷ್ಯನು ಸಂಘಜೀವಿ; ಸಮಾಜದೊಡನೆ ಸಂಪರ್ಕದಲ್ಲಿರದೇ ಆತ ಬಾಳಲಾರ. ಪ್ರಪಂಚದ ನಾನಾ ಸ್ಥಳಗಳಲ್ಲಿ ಜರುಗುವ ವಿದ್ಯಮಾನಗಳನ್ನು ತಿಳಿಯಲು ಸದಾ ಉತ್ಸುಕನಾಗಿರುತ್ತನೆ. ಹೀಗಾಗಿ ಸಮಾಚಾರಗಳನ್ನು ಬಿತ್ತರಿಸುವ ಜತೆಗೆ ಮನರಂಜನೆಯನ್ನು ನೀಡುವಂತಹ ಸಮೂಹಮಾಧ್ಯಮಗಳ ಪಾತ್ರ ಮಹತ್ತರದ್ದಾಗಿದೆ. ಇವುಗಳಿಲ್ಲದ ನಾಗರೀಕ ಸಮಾಜವನ್ನು ಊಹಿಸಿಕೊಳ್ಳಲೂ ಅಸಾಧ್ಯವಾಗಿದೆ. ಹೀಗೆ ಸಮಾಜದ ಅವಿಭಾಜ್ಯ ಅಂಗವಾದ ಸಮೂಹಮಾಧ್ಯಮಗಳು ಆರೋಗ್ಯಕರ ವಾತಾವರಣವನ್ನು ಕಾಪಿಡುವಲ್ಲಿ ತಮ್ಮದೇ ಆದ ಮಹತ್ತರ ಜವಾಬ್ದಾರಿಯನ್ನು ಹೊಂದಿವೆ ಎನ್ನುವುದನ್ನು ಮರೆಯಬಾರದು.

ಎಲ್ಲರೂ ತಿಳಿದಂತೆ ಆಕಾಶವಾಣಿ, ವರ್ತಮಾನ ಪತ್ರಿಕೆಗಳು, ದೂರದರ್ಶನ ಹಾಗೂ ಈ ಸಾಲಿಗೆ ಇತ್ತೀಚೆಗೆ ಸೇರಿದ ಅಂತರ್ಜಾಲ [Internet] ಸಮೂಹಮಾಧ್ಯಮಗಳಲ್ಲಿ ಪ್ರಮುಖವಾದವುಗಳು. ಜಗದ ಯಾವುದೇ ಮೂಲೆಯಲ್ಲಿ ನೆಡೆಯುವ ವರ್ತಮಾನವನ್ನು ಕ್ಷಣಾರ್ಧದಲ್ಲಿ ನಮ್ಮೆದುರಿಗೆ ಇವುಗಳು ಪ್ರಸ್ತುತಪಡಿಸುತ್ತವೆ.ಹಾಗಾಗ್ಯೂ ಸಮೂಹಮಾಧ್ಯಮಗಳಲ್ಲಿ ಹೆಚ್ಚಿನವು ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆಯುವಲ್ಲಿ ವಿಫಲವಾಗಿವೆ ಎಂದು ಹೇಳಲು ವಿಷಾದವೆನಿಸುತ್ತಿದೆ.

ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವೃತ್ತಪತ್ರಿಕೆಗಳು ಮಹತ್ತರವಾದ ಪಾತ್ರವಹಿಸಿದ್ದವು. ಅನೇಕ ದೇಶಭಕ್ತರು ತಮ್ಮ ವಿಚಾರಧಾರೆಯನ್ನು ಇವುಗಳ ಮುಖಾಂತರ ಜನತೆಯೆದುರು ತೆರೆದಿಟ್ಟರು. ಇದರಿಂದ ಸ್ಫೂರ್ತಿ ಹೊಂದಿದ ಭಾರತೀಯರು ಹೋರಾಟದಲ್ಲಿ ಭಾಗವಹಿಸಿ ಬಲಿದಾನಗೈದರು. ಮಹಾತ್ಮಾ ಗಾಂಧೀಜಿಯವರ ’ಹರಿಜನ’, ಶ್ರೀ ಗೋಪಾಲಕೃಷ್ಣ ಗೋಖಲೆಯವರ ’ಸ್ವರಾಜ್’, ಮೊದಲಾದ ಪತ್ರಿಕೆಗಳು ಇವುಗಳಲ್ಲಿ ಪ್ರಮುಖವಾದವುಗಳು. ಅವುಗಳನ್ನು ಇಂದಿಗೂ ಪತ್ರಿಕೋದ್ಯಮದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲುಗಳೆಂದು ಪರಿಗಣಿಸಲಾಗುತ್ತಿದೆ. ಇದಲ್ಲದೇ ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ೧೮೯೫ರಲ್ಲಿ ಆರಂಭವಾದ ’ಬ್ರಹ್ಮವಾದಿನ್’ ಪತ್ರಿಕೆ ಮೊದಲಾದ ವುಗಳು ಯುವಕರನ್ನು ಸನ್ಮಾರ್ಗದಲ್ಲಿ ನೆಡೆಯಲು ಪ್ರೇರೇಪಿಸಿದವು. [ಈ ಪತ್ರಿಕೆಯು ಇಂದಿಗೂ ಚೆನ್ನೈನ ಶ್ರೀ ರಾಮಕೃಷ್ಣ ಮಠದಿಂದ ’ದಿ ವೇದಾಂತ ಕೇಸರಿ’ಯೆಂಬ ಹೆಸರಿನಿಂದ ಪ್ರಕಾಶಿತವಾಗುತ್ತಿದೆ.] ಹೀಗೆ ಅನೇಕ ಪತ್ರಿಕೆಗಳು ಅಂದು ದೇಶದ ಭವಿಷ್ಯವನ್ನು ನಿರ್ಮಿಸಲು ತಮ್ಮದೇ ಆದ ಕೊಡುಗೆ ನೀಡಿವೆ.

ಆದರೆ ಇಂದಿನ ಬಹುತೇಕ ಪತ್ರಿಕೆಗಳು ದೇಶವನ್ನು ಮುನ್ನಡೆಸಲು ಬೇಕಾದ ಸತ್ವವನ್ನು ಜನತೆಗೆ ನೀಡುವಲ್ಲಿ ಬಹುತೇಕ ವಿಫಲವಾಗಿವೆಯೆಂದರೆ ತಪ್ಪಾಗಲಾರದು. ಶ್ರೀ ಎ. ಪಿ. ಜೆ. ಅಬ್ದುಲ್ ಕಲಾಂರವರು ತಮ್ಮ ಲೇಖನವೊಂದರಲ್ಲಿ ಬರೆದಿರುವಂತೆ, ನಮ್ಮ ಮಾಧ್ಯಮಗಳು ಋಣಾತ್ಮಕ ವಿಚಾರಗಳನ್ನೇ ಪ್ರಮುಖ ಸುದ್ಧಿಯಾಗಿಸಿಬಿಡುತ್ತವೆ. ಎಲ್ಲೋ ನೆಡೆದ ದರೋಡೆ, ಭ್ರಷ್ಟಾಚಾರ, ಲಂಚಗುಳಿತನ, ರಾಜಕೀಯದ ಪಟ್ಟುಗಳು ಪತ್ರಿಕೆಯ ಪ್ರಧಾನ ಸುದ್ದಿಯಾದರೆ, ರಾಜಸ್ಥಾನದ ಯುವಕನೊಬ್ಬ ವಿದ್ಯುತ್ ರಹಿತ ಶೈತ್ಯಾಗಾರ ನಿರ್ಮಿಸಿದ್ದು, ದೇಶೀಯ ಕ್ರೀಡಾಪಟುಗಳ ದಾಖಲೆಗಳು, ಮಲೆನಾಡಿನ ಮೂಲೆಯಲ್ಲಿ ರೈತನೊಬ್ಬನ ಕೃಷಿವಲಯದ ಸಾಧನೆಗಳು ಒಂದೆರಡು ಸಾಲಿನಲ್ಲಿ ಒಳಪುಟಗಳಲ್ಲಿ ಸ್ಥಾನ ಪಡೆಯುತ್ತವೆ. ಪ್ರತಿದಿನ ಬೆಳಗ್ಗೆ ಎದ್ದು ವಂಚನೆ, ಭೂ-ಹಗರಣ, ರಾಜಕೀಯ ವ್ಯಕ್ತಿಗಳ ಬಾಲಿಶ ಹೇಳಿಕೆಗಳನ್ನು ಓದುತ್ತಾ ಹೋದರೆ, ಸಾಮಾನ್ಯನು ಅವುಗಳಿಂದ ಸ್ಫೂರ್ತಿ ಹೊಂದಲು ಸಾಧ್ಯವೆ? ಈ ಪ್ರಶ್ನೆಗೆ ಪ್ರಜ್ಞಾವಂತ ಪತ್ರಿಕಾ ಮಾಧ್ಯಮ ಪ್ರಾಮಾಣಿಕವಾಗಿ ಉತ್ತರ ಹುಡುಕಬೇಕಿದೆ.

ಇನ್ನು ಸದಭಿರುಚಿಯ ಸುಸಂಸ್ಕಾರಯುತ ಮಾಧ್ಯಮವೆಂದೇ ಬಿಂಬಿತವಾಗಿರುವ ಬಾನುಲಿ[ರೇಡಿಯೋ] ಮಾಧ್ಯಮವೂ ಈ ಸಮಸ್ಯೆಗೆ ಹೊರತಾಗಿಲ್ಲ. ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿದ್ದ ಸಂಗೀತಕಾರ್ಯಕ್ರಮಗಳನ್ನು ಕೇಳುತ್ತಲೇ ಹಿಂದಿನ ತಲೆಮಾರಿನ ಗೀತರಚನೆಕಾರರು, ಸಂಗೀತ ಸಂಯೋಜಕರು ರೂಪುಗೊಂಡಿದ್ದರು. ಅದರಲ್ಲಿ ಪ್ರಸಾರವಾಗುವ ಚಿಂತನ, ಕೃಷಿರಂಗ, ಸಂಗೀತ ಕಾರ್ಯಕ್ರಮಗಳನ್ನು ಆಲಿಸುವುದು ಜನರ ದಿನಚರಿಯಲ್ಲಿ ಹಾಸುಹೊಕ್ಕಾಗಿತ್ತು. ಆಕಾಶವಾಣಿ ಕಲಾವಿದರಿಗೆ ಸಮಾಜದಲ್ಲಿ ಗೌರವ ಲಭಿಸುತ್ತಿತ್ತು. ಸುದೈವವಶಾತ್ ಹಳೆಯ ಆಕಾಶವಾಣಿಯು ತನ್ನ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದಿದ್ದರೂ ಶ್ರೋತೃಗಳು ಅದರಿಂದ [ಇತರ ಮಾಧ್ಯಮಗಳ ಆಕರ್ಷಣೆ, ಒತ್ತಡದಿಂದ ಕೂಡಿದ ಜೀವನಶೈಲಿಯಲ್ಲಿ ಸಮಯವಿಲ್ಲದಿರುವುದೇ ಮೊದಲಾದ ಕಾರಣಗಳಿಂದ]

ವಿಮುಖವಾಗುತ್ತ ಬಂದಿರುವುದು ನಮ್ಮ ದುರದೃಷ್ಟವೆನ್ನೋಣವೇ? ಅದೇ ಮಾಧ್ಯಮದ ಹೊಸ ಅವತರಣಿಕೆಯಾದ ಎಫ್. ಎಂ. ವಾಹಿನಿಗಳು ಜನಪ್ರಿಯವಾಗಿವೆ. ಆದರೆ ಅದರಲ್ಲಿ ಸಂಸ್ಕೃತಿಯನ್ನು ಬಿಂಬಿಸುವ, ಯುವಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವ ಕಾರ್ಯಕ್ರಮಗಳು ಕೇವಲ ಬೆರಳೆಣಿಕೆಯಷ್ಟು ಇರಬಹುದೆಂದು ಹೇಳಲು ವಿಷಾದವಾಗುತ್ತದೆ. ಮನರಂಜನೆಯ ಹೆಸರಿನಲ್ಲಿ ಒಂದು ದೇಶವನ್ನು, ಭಾಷೆಯನ್ನು ಅಥವಾ ಪ್ರಾಂತ್ಯವೊಂದನ್ನು ಹೀಗೆಳೆಯುವ ಬಗ್ಗೆ ಅಲ್ಲಲ್ಲಿ ಅಪಸ್ವರಗಳು ಕೇಳಿಬರುತ್ತಿದೆ. ಆವೇಶದ ಭರದಲ್ಲಿ ಕೆಲವೊಮ್ಮೆ ನಿರೂಪಣೆ ದಿಕ್ಕುತಪ್ಪಿ ಎತ್ತೆತ್ತಲೋ ಜಾರಿಬಿಡುತ್ತದೆ. ಇದು ಅಷ್ಟೊಂದು ಆರೋಗ್ಯಕರ ಬೆಳವಣಿಗೆಯಲ್ಲ.

ಇನ್ನೊಂದು ಪ್ರಮುಖ ಮಾಧ್ಯಮವಾದ ’ಮೂರ್ಖರ ಪೆಟ್ಟಿಗೆ’ಯು ’ಜಾಣರ ಪೆಟ್ಟಿಗೆ’ಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ದೂರದರ್ಶನವು ಸೃಜನಶೀಲತೆಯನ್ನು ಹಾಳುಗೆಡವುತ್ತದೆಯೆಂಬ ಕೂಗು ಬಹುಕಾಲದಿಂದಲೂ ಕೇಳಿಬರುತ್ತಿದೆ. ಇದರಲ್ಲಿ ಬಹುಮಟ್ಟಿಗೆ ಸತ್ಯವೂ ಅಡಗಿದೆ. ಮಕ್ಕಳು ಬಾಲ್ಯಸಹಜ ಆಟಪಾಟಗಳಿಂದ ದೂರವಾಗಿ ದೂರದರ್ಶನದ ಎದುರಿಗೆ ಕುಳಿತಿರುವುದನ್ನು ಎಲ್ಲಾ ಮನೆಗಳಲ್ಲೂ ಕಾಣಬಹುದು. ದೂರದರ್ಶನದೆದುರು ಕುಳಿತು ವೀಕ್ಷಿಸುವಾಗ ನಮ್ಮ ಕ್ರಿಯಾಶೀಲತೆ [Creativity] ಕೆಲಸ ಮಾಡದೇ, ನಿರ್ದೇಶಕರು ನಿರ್ಮಿಸಿದ್ದನ್ನೇ ನಮ್ಮ ಮನಸ್ಸು ಅನುಸರಿಸುತ್ತಾ ಹೋಗುತ್ತದೆ. ಕೆಲವೊಂದು ವಾಹಿನಿಗಳು ರಾಜಕೀಯ ಪಕ್ಷಗಳ ಮುಖವಾಹಿನಿಯಂತೆ ಕೆಲಸ ಮಾಡುವುದನ್ನು ಸಮರ್ಥಿಸಿಕೊಳ್ಳಲಾಗದು. ಕೆಲವೊಮ್ಮೆ ’ಬ್ರೇಕಿಂಗ್ ನ್ಯೂಸ್’ ತಲೆಬರಹದಡಿಯಲ್ಲಿ ಹಳಸಲು ಸುದ್ದಿಯನ್ನೇ ಮತ್ತೆ ಮತ್ತೆ ವರ್ಣರಂಜಿತವಾಗಿ ಪ್ರಸಾರಮಾಡುವುದನ್ನು ನೋಡಿದಾಗ ತಲೆ ಚಿಟ್ಟುಹಿಡಿಯುತ್ತದೆ! ದೂರದರ್ಶನದಲ್ಲಿ ಬಂದಿದ್ದನ್ನೆಲ್ಲಾ ಸತ್ಯವೆಂದು ನಂಬುವ ವೀಕ್ಷಕರಿದ್ದಾರೆ. ಅವರಿಗೆ ಸುಳ್ಳುಸುದ್ದಿಯನ್ನು ನೀಡುವುದು, ತನ್ಮೂಲಕ ಸಮಾಜಕ್ಕೆ ಹಾನಿಯನ್ನುಂಟುಮಾಡುವುದು ಅಕ್ಷಮ್ಯ ಅಪರಾಧವೇ ಸರಿ. ಇದೊಂದು ಸಮಸ್ಯೆಯಾದರೆ, ಅನೇಕ ವಾಹಿನಿಗಳಲ್ಲಿ ಪ್ರಸಾರವಾಗುವ ಕೀಳು ಅಭಿರುಚಿಯ ಕಾರ್ಯಕ್ರಮಗಳು, ಕುಟುಂಬದ ಮೂಲಸತ್ವವನ್ನು ಅಲ್ಲಾಡಿಸುವ ಎಳೆ ಹಿಡಿದುಕೊಂಡು ಸಾಗುವ ಧಾರಾವಾಹಿಗಳು ಸಾಮಾಜಿಕ ಸ್ವಾಸ್ಥ್ಯವನ್ನೇ ಅಲುಗಾಡಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಹಾಗಾಗಿ ’ಹಂಸಕ್ಷೀರ ನ್ಯಾಯ’ದಂತೆ ಒಳ್ಳೆಯದನ್ನು ಸ್ವೀಕರಿಸಿ, ಬೇಡವಾದುದನ್ನು ತ್ಯಜಿಸುವ ವಿವೇಚನೆಯನ್ನು ವೀಕ್ಷಕಪ್ರಭುಗಳು ಹೊಂದಬೇಕು!

ಸಮೂಹಮಾಧ್ಯಮಗಳ ಸಾಲಿಗೆ ಹೊಸದಾಗಿ ಸೇರಿದ, ಜ್ಞಾನಕ್ರಾಂತಿ[Knowledge Revolution]ಯ ಕೂಸು ಅಂತರ್ಜಾಲ. ಇದರ ಸಹಾಯದಿಂದ ಪ್ರಪಂಚವೆಲ್ಲಾ ಒಂದು ಪುಟ್ಟ ಗ್ರಾಮದಂತಾಗಿದೆ. ನಾನಾಖಂಡಗಳ, ವಿವಿಧ ದೇಶಗಳ ಜನರು ಪರಸ್ಪರ ಸಂಪರ್ಕಹೊಂದಲು ಇದು ಒಂದು ಸುಲಭತರ ಮಾಧ್ಯಮವಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ಸಾಲಿನಲ್ಲಿ ಅಂತರ್ಜಾಲವು ಶಾಂತಿ ವಿಭಾಗದಲ್ಲಿ ’ನೋಬೆಲ್’ ಪ್ರಶಸ್ತಿಗೆ ಪರಿಗಣಿತವಾಗಿತ್ತು. ಆದರೆ ಈ ಜಗದಲ್ಲಿ ಯಾವುದೇ ಅಂಶವು ಒಳಿತು ಹಾಗೂ ಕೆಡಕುಗಳೆರಡನ್ನೂ ಹೊಂದಿರುತ್ತದೆಯಷ್ಟೇ? ಅದೇ ರೀತಿ ಅಂತರ್ಜಾಲದಲ್ಲಿಯೂ ಅನೇಕ ನ್ಯೂನ್ಯತೆಗಳನ್ನು ಕಾಣಬಹುದಾಗಿದೆ. ಸಮಾಜವನ್ನು ತಲ್ಲಣಗೊಳಿಸುವ ಅನೇಕ ಊಹಾಪೋಹ[Rumours]ಗಳ ಮೂಲ ಅಂತರ್ಜಾಲವೇ ಆಗಿರುತ್ತದೆ. ಇದರಿಂದ ಕೆಲವೊಮ್ಮೆ ಅನಗತ್ಯ ಗೊಂದಲಗಳು ನಿರ್ಮಾಣವಾಗುತ್ತವೆ. ಇವುಗಳ ಹಿಂದೆ ವಿಕ್ಷಿಪ್ತ ಮನಸ್ಸುಗಳ ಕೈವಾಡ ಅಡಗಿರುತ್ತದೆ. ಇನ್ನು ಕೆಲವು ಹ್ಯಾಕರ್‌[ಅಂತರ್ಜಾಲದ ಮಾಹಿತಿಗೆ ಅನಧಿಕೃತವಾಗಿ ಲಗ್ಗೆಹಾಕಿ ಅಲ್ಲಿಂದ ಅತ್ಯಮೂಲ್ಯ, ರಹಸ್ಯ ಮಾಹಿತಿಗಳನ್ನು ಕದಿಯುವವರು]ಗಳ ಕೈಚಳಕದಿಂದ ರಾಷ್ಟ್ರೀಯ ಹಾಗೂ ವೈಯುಕ್ತಿಕ ಮಾಹಿತಿಗಳಿಗೆ ಧಕ್ಕೆ ಬರುವ ಅಪಾಯವೂ ಎದುರಾಗುತ್ತಿದೆ. ಈಗಿನ ಮಾಹಿತಿ ತಂತ್ರಜ್ಞಾನಯುಗದಲ್ಲಿ ಬಹುತೇಕ ಎಲ್ಲಾ ಮಾಹಿತಿಗಳೂ ಆನ್-ಲೈನ್‌ನಲ್ಲಿ ಲಭ್ಯವಾಗುವುದರಿಂದ ಅವುಗಳ ಸಂರಕ್ಷಣೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಅಂತರ್ಜಾಲ ಜನಿಸಿದ ದೇಶವಾದ ಅಮೆರಿಕಾದಲ್ಲಿಯೇ ವರ್ಷವೊಂದರಲ್ಲಿ ೧೦ ಬಿಲಿಯನ್ ಡಾಲರ್‌ಗಳಿಗೂ ಹೆಚ್ಚು ಹಣ ಸೈಬರ್ ಅಪರಾಧಗಳಿಂದ ದರೋಡೆಯಾಗುತ್ತದೆ ಎಂದು ವರದಿಯೊಂದು ಹೇಳುತ್ತಿದೆ. ಅದೇ ವರದಿಯಲ್ಲಿ ದೇಶದ ಸಾರ್ವಭೌಮತೆಗೆ, ಸಂಸ್ಕೃತಿ, ಮೌಲ್ಯಗಳಿಗೆ ಅಂತರ್ಜಾಲವು ಮಾರಕವಾಗಿದೆ ಎಂಬ ಕಳವಳವೂ ವ್ಯಕ್ತವಾಗಿದೆ. [ಆಧಾರ ಹಾಗೂ ಹೆಚ್ಚಿನ ಮಾಹಿತಿಗೆ ವೀಕ್ಷಿಸಿ: http://www.uscc.gov/researchpapers/2000_2003/pdfs/neg.pdf]. ಹದಿಹರೆಯದವರು ಅಂತರ್ಜಾಲದ ಮುಖ್ಯ ಬಳಕೆದಾರರಾಗಿದ್ದಾರೆ. ವಿವಿಧ ಕೀಳು ಅಭಿವ್ಯಕ್ತಿಯ ಜಾಲತಾಣ[Websites]ಗಳು, ಅಪರಾಧಗಳನ್ನು ರೋಚಕವಾಗಿ ಬಣ್ಣಿಸುವ ಜಾಲತಾಣಗಳು ಮೊದಲಾದವುಗಳು ಯುವಮನಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಅಂತರ್ಜಾಲದಲ್ಲಿಯೇ ಮುಳುಗೇಳುವ ಜನರು ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ವಿಕಸನಕ್ಕೆ ಪೂರಕವಾದ ’ಸಾಹಿತ್ಯಲೋಕ’ದಿಂದ ದೂರವಾಗುತ್ತಿದ್ದಾರೆ. ಮೊದಲೆಲ್ಲಾ ಸ್ನೇಹಿತರನ್ನು ಮುಖತಃ ಭೇಟಿಮಾಡುತ್ತಿದ್ದವರು ಈಗ ಮಿಂಚೋಲೆ[E-mail], ಚಾಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುವ ವಾತಾವರಣ ನಿರ್ಮಿತವಾಗಿದೆ.

ಹೀಗೆ ಪ್ರಮುಖ ಸಮೂಹ ಮಾಧ್ಯಮಗಳ ಸಮಾಜಿಕ ದುಷ್ಪರಿಣಾಮಗಳ ಮೇಲ್ನೋಟವನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ. ಐಸ್‌ಬರ್ಗ್[Iceberg] ತತ್ವದಂತೆ ಈ ಸಮಸ್ಯೆಗಳು ಮೇಲ್ನೋಟಕ್ಕೆ ಇಷ್ಟೇ ಕಂಡರೂ, ಆಳವಾಗಿ ಯೋಚಿಸಿದಾಗ ಇವುಗಳು ನಮ್ಮ ಸಮಾಜವನ್ನು, ಸಂಸ್ಕೃತಿಯನ್ನು, ಪರಂಪರಾಗತ ಮೌಲ್ಯಗಳನ್ನು ಶಿಥಿಲಗೊಳಿಸುವ ಅಪಾಯಗಳು ಇಲ್ಲದಿಲ್ಲ.

ಸದಾ ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಬದಲಾವಣೆಯೊಂದೇ ಶಾಶ್ವತ. ಆದರೆ ಬದಲಾವಣೆಯೊಂದಿಗೆ ಸನಾತನ ಮೌಲ್ಯಗಳನ್ನು ಮಿಳಿತಗೊಳಿಸಿ ಮುಂದೆ ಸಾಗುವ ತುರ್ತು ಅವಶ್ಯಕತೆ ನಮ್ಮ ಸಮಾಜಕ್ಕಿದೆ. “ಎಲ್ಲವೂ ಹಾಳಾಗಿದೆ, ಹಿಂದಿನ ದಿನಗಳೇ ಚೆನ್ನಾಗಿತ್ತು” ಎಂಬ ಸಿನಿಕತನಕ್ಕಿಂತ ನಮ್ಮ ಮುಂದಿನ ಪೀಳಿಗೆಗಾಗಿ ಉತ್ತಮವಾದ ಮೌಲ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ನಾಗರೀಕರಾದ ನಾವೆಲ್ಲರೂ, ಹಾಗೂ ಸಮಾಜದ ಕ್ರಿಯಾಶೀಲತೆಗೆ ಕೈಗನ್ನಡಿಯಾದ ಸಮೂಹಮಾಧ್ಯಮಗಳು ಕಾರ್ಯನಿರ್ವಹಿಸಬೇಕಿದೆ. ’ಪುರಾಣಮಿತ್ಯೇವ ನ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತ್ಯವದ್ಯಮ್’ [ಹಿಂದಿನದೇ ಚೆನ್ನಾಗಿತ್ತು ಎನ್ನುವುದೂ ಸರಿಯಲ್ಲ; ಹೊಸದೆಲ್ಲವೂ ಅಪಕ್ವವಾದುದು ಎಂಬ ವಾದವೂ ಸರಿಯಲ್ಲ] ಎನ್ನುವ ಕಾಳಿದಾಸರ ಸೂಕ್ತಿಯಂತೆ ಹೊಸದರಲ್ಲಿರುವ ಉತ್ತಮ ಅಂಶಗಳನ್ನು ಸ್ವಾಗತಿಸೋಣ. ಈ ಲೇಖನವು ಸಮೂಹ ಮಾಧ್ಯಮಗಳ ಋಣಾತ್ಮಕ ಅಂಶಗಳನ್ನು ಜರಿಯುವುದರತ್ತ ಕೇಂದ್ರೀಕೃತವಾದುದಲ್ಲ; ಆದರೆ ಇವುಗಳ ಹಿಂದಿದ್ದ ಸದಾತ್ಮಕ ಆಶಯವು ಹಳಿತಪ್ಪುತ್ತಿರುವ ಕಳಕಳಿಯನ್ನು ವ್ಯಕ್ತಪಡಿಸುವುದರತ್ತ ಒಲವು ಹೊಂದಿದೆ. ಸಮರ್ಥಸಮಾಜವನ್ನು ರೂಪುಗೊಳಿಸುವತ್ತ ಸಮೂಹಮಾಧ್ಯಮಗಳು ಗಮನಹರಿಸಲಿ; ತನ್ಮೂಲಕ ಸತ್ವಯುತ ಸಮಾಜವನ್ನು ರೂಪುಗೊಳಿಸಲು ಮಾಧ್ಯಮಗಳು ದಾರಿದೀಪಗಳಾಗಲಿ ಎಂದು ಆಶಿಸೋಣ. ಅಲ್ಲವೇ?

**********************************

ಜೈ ಗಾಯತ್ರೀ ದೇವಿ

ಲೇಖಕ:

ಎನ್. ಜಿ. ಪ್ರಭುಪ್ರಸಾದ್, ಶೃಂಗೇರಿ

ಮನಸಿಗೆ ಬಹುಕಾಲ ಕಾಡಿದ ಕಥೆ – ’ತತ್ತ್ವಮಸಿ ಶ್ವೇತಕೇತು’

ಮನಸಿಗೆ ಬಹುಕಾಲ ಕಾಡಿದ ಕಥೆ – ’ತತ್ತ್ವಮಸಿ ಶ್ವೇತಕೇತು’

ಕೃಪೆ - ಓಶೋ

ಓರ್ವ ಸನ್ಯಾಸಿಯನ್ನು ಕೈತಪ್ಪಿ ಓರ್ವ ಸಿಪಾಯಿ ಭ್ರಾಂತಿವಶನಾಗಿ ಕೊಂದುಬಿಟ್ಟ. ೧೮೫೭ರ ಮಾತಿದು. ಕ್ರಾಂತಿಯ ದಿನಗಳು. ಓರ್ವ ಮೌನಿ ಸನ್ಯಾಸಿ ಬೆತ್ತಲೆಯಾಗಿ ಅಂಗ್ರೇಜರ ಪಾಳಯದಲ್ಲಿ ಹೋಗುತ್ತಿದ್ದ. ಸಿಪಾಯಿಗಳು ಆತನನ್ನು ಹಿಡಿದು ’ಯಾರು ನೀನು?’ ಎಂದು ಕೇಳಿದರು. ಆದರೆ ಅವನು ಮೌನಿ; ಉತ್ತರಿಸಲಿಲ್ಲ. ಉತ್ತರಿಸದಿದ್ದುದರಿಂದ ಆತನ ಮೇಲೆ ಸಂಶಯ ಹೆಚ್ಚಾಯಿತು. ಅವನ ಮೇಲೆ ಸಂದೇಹಿಸಿ ಓರ್ವ ಅಂಗ್ರೇಜಿ ಸಿಪಾಯಿ ಒಂದು ಭಲ್ಲೆಯನ್ನು ಆತನ ಎದೆಗೆ ಚುಚ್ಚಿದ. ಆ ಸನ್ಯಾಸಿ – ’ಸಾಯುವಾಗ ಮಾತ್ರ ಒಮ್ಮೆ ಮಾತಾಡುವೆ. ಅದಕ್ಕೆ ಮೊದಲು ಮಾತನಾಡುವುದಿಲ್ಲ’ ಎಂದು ವ್ರತ ತೊಟ್ಟಿದ್ದ. ಹಾಗೆಯೇ ಅವನು ಮೂವತ್ತು ವರ್ಷಗಳಿಂದ ಮೌನವನ್ನು ಸಾಧಿಸಿದ್ದ. ಎದೆಗೆ ಭಲ್ಲೆ ನಾಟಿಕೊಂಡೊಡನೆ ಎದೆಯಿಂದ ರಕ್ತದ ಕಾರಂಜಿ ಚಿಮ್ಮಿತು. ಆಗ ಅವನ ಬಾಯಿಂದ ’ತತ್ತ್ವಮಸಿ ಶ್ವೇತಕೇತು’ – ಎಂಬ ಉಪನಿಷದ್ವಚನ ಕೇಳಿಬಂತು. ’ಅಯ್ಯಾ ಶ್ವೇತಕೇತು! ನೀನು ಅವನೇ’ – ಎಂದಿದರ ಅರ್ಥ. ಕೂಡಲೇ ಜನ ಸೇರಿದರು. ’ಏನು ಹಾಗಂದರೆ?’ ಎಂದವರು ಕೇಳಿದರು. ಅದಕ್ಕೆ ಆ ಸನ್ಯಾಸಿ ಉತ್ತರಿಸಿದನಂತೆ – “ನನ್ನ ಉದ್ದೇಶವೆಂದರೆ, ಪರಮಾತ್ಮ ಯಾವ ರೂಪದಲ್ಲೇ ಬರಲಿ ನನಗೆ ಮೋಸ ಮಾಡಲು ಸಾಧ್ಯವಿಲ್ಲ. ಇಂದು ಅವನು ನನಗೆ ಭಲ್ಲೆಯಿಂದ ತಿವಿಯಲು ಬಂದಿರುವನು. ಕೈಯಲ್ಲಿ ಭಲ್ಲೆ ಇದೆ. ಅದರಿಂದ ನನ್ನ ಎದೆಯನ್ನು ತಿವಿಯುತ್ತಿರುವ. ಆದರೆ ನನಗೆ ಮೋಸ ಮಾಡಲು ಸಾಧ್ಯವಿಲ್ಲ. ಏಕೆಂದರೆ ನಾನು ನಿನ್ನನ್ನು ನೋಡುತ್ತಿರುವೆ. ಒಳಗೆ ನೀನೇ ಇರುವೆ - ತತ್ತ್ವಮಸಿ ಶ್ವೇತಕೇತು!” ಎದೆಯಿಂದ ರಕ್ತ ಬಸಿಯುತ್ತಿದ್ದರೂ ಆ ಸಂನ್ಯಾಸಿ ಕುಣಿಯುತ್ತಿದ್ದ. ಏಕೆಂದರೆ ಅವನು ತನ್ನನ್ನು ಕೊಲೆ ಮಾಡಿದವನಲ್ಲೂ ಪರಮಾತ್ಮನನ್ನು ಕಾಣಬಲ್ಲವನಾಗಿದ್ದ.

*********************************

[೨೩-೦೯-೨೦೦೭]

[ಭಜಗೋವಿಂದಮ್ ಸದ್ಗ್ರಂಥ – PP 29]