Thursday, April 14, 2011

ಜೀವನದ ಸಾರ್ಥಕತೆ ಕೇವಲ ಸಂಪತ್ತಿನಿಂದಲ್ಲ

[’ನವಚಿಂತನ’ಕ್ಕೆ ಸ್ವೀಕೃತ ಲೇಖನ]

ಸುಗಮವಾದ ಜೀವನವನ್ನು ನೆಡೆಸಲು ಹಣದ ಅವಶ್ಯಕತೆ ಸಾಕಷ್ಟಿದೆ. ಆದರೆ ಇದೊಂದೇ ಸರ್ವಸ್ವವಲ್ಲ. ಬಂಧುವರ್ಗದವರ ಪ್ರೀತಿ, ಸಮಾಜದಲ್ಲಿ ಗೌರವ, ಸದ್ವಿದ್ಯೆಗಳು ನಮ್ಮಲ್ಲಿದ್ದಾಗ ಮಾತ್ರ ಧನ-ಕನಕಗಳು ನಮ್ಮ ಬದುಕಿಗೆ ಶೋಭೆ ನೀಡುತ್ತವೆ. ಅವುಗಳಿಲ್ಲದೇ ಕೇವಲ ’ಧನಾರ್ಜನೆಗಾಗಿಯೇ ನಮ್ಮ ಬದುಕು’ ಎಂದು ತಿಳಿದುಕೊಂಡು, ಸನ್ಮಾರ್ಗಗಳನ್ನಲಕ್ಷಿಸಿ ಅಕ್ರಮ ಸಂಪಾದನೆಯಲ್ಲಿ ತೊಡಗಿ ಹಣವೆಂಬ ಮರೀಚಿಕೆಯ ಹಿಂದೋಡಿದರೆ, ಜೀವನದ ಕೊನೆಗಾಲದಲ್ಲಿ ನಮ್ಮನ್ನು ಶೂನ್ಯವಾವರಿಸುತ್ತದೆ. ಸುಭಾಷಿತಕಾರರೊಬ್ಬರು ಧನಸಂಪಾದನೆಯ ಬಗ್ಗೆ ಈ ರೀತಿ ನುಡಿದಿದ್ದಾರೆ:

ಅರ್ಥಮಾರ್ಜನೇ ದುಃಖಂ ಆರ್ಜಿತಂ ಚ ರಕ್ಷಣೇ|

ಆಯೇ ದುಃಖಂ ವ್ಯಯೇ ದುಃಖಂ ದಿಗರ್ಥಾಃ ಕಷ್ಟಸಂಶ್ರಯಾಃ||

ಧನಸಂಪಾದನೆಯು ಕಷ್ಟಕರವಾದುದು ಹಾಗೆಯೇ ಅದನ್ನು ರಕ್ಷಿಸುವುದೂ ಕಷ್ಟ. ಈ ರೀತಿಯಾಗಿ ಬರುವಾಗಲೂ, ಹೋಗುವಾಗಲೂ ಕಷ್ಟವನ್ನೇ ನೀಡುವ ಧನಸಂಪತ್ತಿಗೆ ಧಿಕ್ಕಾರವಿರಲಿ! ಹೀಗೆ ಸಂಪತ್ತನ್ನು ಶೇಖರಿಸುವುದರಲ್ಲಿ ಇರುವ ಕಷ್ಟಗಳ ಬಗ್ಗೆ ಕವಿಯೊಬ್ಬರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಜೀವನಕ್ಕೆ ಹಣ ಅವಶ್ಯಕವಾದರೂ, ಅದೊಂದೇ ಎಲ್ಲವೂ ಅಲ್ಲ.

ಆಧುನಿಕ ಯುಗದಲ್ಲಿ ಭೋಗಕ್ಕೆ ಪ್ರಾಧಾನ್ಯತೆ ಹೆಚ್ಚಿರುವುದರಿಂದ ಗುಣಕ್ಕೆ ಸಿಗಬೇಕಾದ ಮನ್ನಣೆ ಹಣಕ್ಕೆ ಸಿಗುತ್ತಿದೆ. ವ್ಯಕ್ತಿಯೊಬ್ಬನು ನೈತಿಕವಾಗಿ ಅದೆಷ್ಟೇ ಅಧಃಪತನಕ್ಕಿಳಿದಿರಲಿ, ಅವನು ಧನಿಕನಾಗಿದ್ದರೆ ಸರ್ವಮಾನ್ಯನಾಗಿಬಿಡುತ್ತಾನೆ. ಇದೊಂದು ವಿಪರ್ಯಾಸವೇ ಸರಿ. ಏಕೆಂದರೆ ಮನುಜನ ಜೀವಿತಾವಧಿಯ ಸಾಧನೆಯನ್ನು ಅವನು ಮಾಡಿದ ಸತ್ಕಾರ್ಯಗಳು ಸಾರುತ್ತವೆಯೇ ಹೊರತು ಅವನು ಸಂಪಾದಿಸಿದ ಧನ-ಕನಕಗಳಲ್ಲ. ದಾರ್ಶನಿಕರು ಧನದೆಡೆಗಿನ ವ್ಯಾಮೋಹವನ್ನು ಒಂದು ’ಬಾಯಾರಿಕೆ’ [ತೃಷೆ]ಯೆಂದು ಪರಿಗಣಿಸಿದ್ದಾರೆ. ಆದರೆ ಈ ದಾಹವು ತೀರುವುದೇ ಇಲ್ಲ. ಗಳಿಸಿದಷ್ಟೂ ಇನ್ನೂ ಹೆಚ್ಚು ಬೇಕೆಂದು ಮನಸ್ಸು ಹಾತೊರೆಯುತ್ತದೆಯೇ ಹೊರತು, ಇಷ್ಟು ಸಾಕೆಂದು ಎಂದಿಗೂ ಅನಿಸುವುದಿಲ್ಲ.

ಈ ಅನಿಶ್ಚಿತವಾದ ಪ್ರಪಂಚದಲ್ಲಿ ನಾವ್ಯಾರೂ ಶಾಶ್ವತವಲ್ಲವೆನ್ನುವುದು ಸರ್ವವಿಧಿತ. ಆದರೂ ನಾವು ಚಿರಂಜೀವಿಗಳೆಂದೇ ಭಾವಿಸಿ ಹಣವನ್ನು ಕೂಡಿಡುತ್ತೇವೆ. ಈ ಲೆಕ್ಕಾಚಾರದಲ್ಲಿ ನಮ್ಮ ನೆಮ್ಮದಿಯನ್ನು ಹಾಳುಗೆಡವಿಕೊಂಡಿರುತ್ತೇವೆ; ಎಷ್ಟೋ ಸುಂದರವಾದ ಸಂಬಂಧಗಳು ನಮಗರಿವಿಲ್ಲದಂತೆಯೇ ನಿಧಾನವಾಗಿ ತುಂಡಾಗಿರುತ್ತವೆ. ಜೀವನ ಮಧುರವಾಗುವುದು ನಮ್ಮಲ್ಲಿನ ಸಂಪತ್ತು ಅಧಿಕವಾದಾಗ ಮಾತ್ರವೆಂದು ಭಾವಿಸಿ ’ಬದುಕು ನಮಗೆ ನೀಡುತ್ತಿರುವ ಆನಂದವನ್ನು ಮುಂದೆ ಆಸ್ವಾದಿಸುವ’ ಎಂದು ಜೀವನವನ್ನು ತಳ್ಳುತ್ತೇವೆ. ವಿಪರ್ಯಾಸವೆಂದರೆ, ಹಾಗೆ ಭಾವಿಸಿರುವವರ ತಿಜೋರಿ ತುಂಬುವುದೂ ಇಲ್ಲ; ಅವರ ಜೀವನದಲ್ಲಿ ಆನಂದವೆಂದಿಗೂ ನೆಲೆಸುವುದೂ ಇಲ್ಲ. ಸಂಪತ್ತನ್ನು ಗಳಿಸುವ ಹೋರಾಟಕ್ಕೆ ತಮ್ಮ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ಒಂದು ದಿನ ಮೃತ್ಯುವಿನ ಮನೆಯೆಡೆಗೆ ವಿಷಾದಪೂರ್ವಕವಾಗಿ ತೆರಳುತ್ತಾರೆ. ಬದುಕು ಸುಂದರವಾಗಿ ಅರಳುವುದನ್ನು ಆಸ್ವಾದಿಸಲು ಹಣದ ಅವಶ್ಯಕತೆಯಿಲ್ಲವೆನ್ನುವ ಸರಳ ಸತ್ಯ ಕೊನೆಯವರೆಗೂ ಅವರಿಗೆ ಅರಿವಾಗುವುದೇ ಇಲ್ಲ. ಒಂದು ಸುಮಧುರ ಮುಂಜಾನೆಯ ಸೂರ್ಯೋದಯವನ್ನು ಸವಿಯಲು, ಪಕ್ಷಿಗಳ ಮಂಜುಳಗಾನವನ್ನು ಕೇಳಿಸಿಕೊಳ್ಳಲು, ಶಾಂತವಾಗಿ ನಿಂತಿರುವ ಸರೋವರವೊಂದರ ಚೆಲುವನ್ನು ಆಸ್ವಾದಿಸಲು, ಮುಗ್ಧಮಗುವೊಂದರ ನಿಷ್ಕಲ್ಮಶ ನಗುವನ್ನು ನೋಡಿ ಸಂತಸಪಡಲು, ಸಂಜೆಯ ಸೊಬಗಿನಲ್ಲಿ ನಿರಾತಂಕವಾಗಿ ಹಸಿರು ವನರಾಶಿಯ ನಡುವೆ ನಮ್ಮನ್ನೇ ನಾವು ಮರೆತು ವಿಹರಿಸಲು ಇಲ್ಲಿಯವರೆಗೂ ಭಗವತ್ಕೃಪೆಯಿಂದ ನಮಗ್ಯಾರೂ ಶುಲ್ಕ ವಿಧಿಸಿಲ್ಲ. ಅಲ್ಲವೇ? ಈ ವಿಚಾರದಲ್ಲಿ ನಗರವಾಸಿಗಳು ನಮ್ಮನ್ನು ನೋಡಿ ಅಸೂಯೆಪಡಬಹುದು. ಆದರೂ ’ಮನಸ್ಸಿದ್ದಲ್ಲಿ ಮಾರ್ಗ’ವೆಂಬಂತೆ ದೊಡ್ಡ ಶಹರುಗಳಲ್ಲಿಯೂ ನಮಗೆ ಬೇಕಾದಂತಹ ಪರಿಸರವನ್ನು ಸ್ವಲ್ಪ ಪ್ರಯತ್ನಪಟ್ಟು ಹುಡುಕಿಕೊಳ್ಳಬಹುದಲ್ಲವೇ? ಹೀಗೆ ಕ್ಷಣಕ್ಷಣವೂ ಜೀವಂತಿಕೆಯಿಂದ, ಉತ್ಸಾಹದಿಂದ ಬದುಕುವುದರಲ್ಲಿಯೇ ಭಗವಂತನು ನಮಗೆ ದಯಪಾಲಿಸಿರುವ ಜೀವನದ ಸಾರ್ಥಕತೆ ಅಡಗಿದೆ.

ಇನ್ನು ಬಡತನ, ಸಿರಿವಂತಿಕೆಯೆನ್ನುವುದು ಮನದ ಸ್ಥಿತಿಯೇ ಹೊರತು ಲೌಕಿಕ ಧನಕನಕಗಳಿಂದ ಅಳೆಯುವಂತಹುದಲ್ಲ. ಬಡವರ ಮನೆಯಲ್ಲಿ ಅತಿಥಿಸತ್ಕಾರ, ಸ್ನೇಹ-ವಿಶ್ವಾಸಗಳಿಂದ ಕೂಡಿದ ಜೀವಂತಿಕೆ ಕಂಡುಬಂದರೆ, ಅಯಾಚಿತವಾಗಿ, ಅನ್ಯಮಾರ್ಗಗಳಿಂದ ಸಾಹುಕಾರರಾದವರ ಬಹುತೇಕ ಮನೆಗಳಲ್ಲಿ ಧನದ ದರ್ಪ, ಶ್ರೀಮಂತಿಕೆಯ ಕುಹಕದ ಮಾತುಗಳಿಂದ ಕೂಡಿದ ಉಸಿರುಕಟ್ಟಿಸುವ ವಾತಾವರಣವಿರುತ್ತದೆಯೆಂಬುದು ಬದುಕನ್ನು ಕಂಡವರ ಅಂಬೋಣವಾಗಿದೆ. ಸಜ್ಜನರಾಗಿರುವ ಶ್ರೀಸಾಮಾನ್ಯರ ಬಗ್ಗೆ ಮಹಾಭಾರತದಲ್ಲಿ ಹೀಗೆ ಪ್ರಶಂಸಿಸಲಾಗಿದೆ:

ತೃಣಾನಿ ಭೂಮಿರುದಕಂ ವಾಕ್ಚತುರ್ಥೀ ಚ ಸೂನೃತಾ|

ಏತಾನ್ಯಪಿ ಸತಾಂ ಗೇಹೇ ನೋಚ್ಛಿದ್ಯಂತೇ ಕದಾಚನ||

[ಮಹಾಭಾರತ, ಉದ್ಯೋಗ-೩೬-೩೪]

“ಸಜ್ಜನರ ಮನೆಗಳಲ್ಲಿ ಹುಲ್ಲು [ಚಾಪೆ], ನೆಲ, ನೀರು, ಒಳ್ಳೆಯ ಮಾತುಗಳು – ಈ ನಾಲ್ಕು ಅಂಶಗಳು ಎಂದೆಂದೂ ತಪ್ಪಲಾರವು.” ಹೀಗೆ ಸಜ್ಜನರು ತಮ್ಮಲ್ಲೆಷ್ಟೇ ನೋವುಗಳಿದ್ದರೂ, ಅದರಿಂದ ಬಾಧಿತರಾಗದೇ ಆಗಮಿಸಿದವರನ್ನು ಸತ್ಕರಿಸುವರೆಂಬ ವಿಚಾರವನ್ನಿಲ್ಲಿ ತಿಳಿಸಲಾಗಿದೆ.

’ದುಡ್ಡಿನಿಂದ ಹಾಸಿಗೆಯನ್ನು ಕೊಂಡುಕೊಳ್ಳಬಹುದು, ನಿದ್ರೆಯನ್ನಲ್ಲ’ ಎನ್ನುವುದು ಒಂದು ಲೋಕೋಕ್ತಿ. ಹಣದ ಶಕ್ತಿಗೊಂದು ಮಿತಿಯಿದೆ. ಎಲ್ಲವನ್ನು ಆರ್ಥಿಕ ಲಾಭ-ನಷ್ಟಗಳ ತಕ್ಕಡಿಯಲ್ಲಿ ತೂಗಹೊರಟರೆ ’ಬದುಕುವಿಕೆ’ ಜೀವನವಾಗುವುದಿಲ್ಲ; ಬದಲಿಗೆ ವ್ಯಾಪಾರದಂತಾಗುತ್ತದೆ. ಹಣಸಂಪಾದನೆಗೆಂದು ವಾಮಮಾರ್ಗಗಳನ್ನು ಅನುಸರಿಸುವುದು ತರವಲ್ಲ. ಅದರಿಂದ ಬಹಿರಂಗದಲ್ಲಿ ನಮ್ಮ ಗೌರವ ಹೆಚ್ಚಾದೀತು; ಆದರೆ ಅಂತರಂಗದಲ್ಲಿ ನಮ್ಮ ಅಂತಃಸಾಕ್ಷಿಯೆದುರು ನಾವೇ ಕುಬ್ಜರಾಗುತ್ತಾ ಹೋಗುತ್ತೇವೆ.

ಹೀಗೆ ಹಣವೊಂದೇ ಸರ್ವಸ್ವವಲ್ಲ ಎಂಬ ಅಂಶ ಮನವರಿಕೆಯಾದಾಗ ಆನಂದದಿಂದ ಬಾಳಲು ಸಾಧ್ಯವಾಗುತ್ತದೆ. ಸಂಪತ್ತಿಗೆ ಕೊಡಬೇಕಾದಷ್ಟೇ ಪ್ರಾಧಾನ್ಯತೆಯನ್ನು ನೀಡಿ, ಸನ್ಮಾರ್ಗದಲ್ಲಿ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದರತ್ತ ಮನಮಾಡೋಣ. ಈ ನಿಟ್ಟಿನಲ್ಲಿ ನಮ್ಮೆಲ್ಲರಲ್ಲೂ ಅಡಗಿರುವ ಆ ದಿವ್ಯ ಮಹಾ ಚೇತನವು ನಮ್ಮನ್ನೆಂದಿಗೂ ಪ್ರೇರಿಸುತ್ತಿರಲಿ.

**********************************

ಜೈ ಗಾಯತ್ರೀ ದೇವಿ

ಲೇಖಕ:

ಪ್ರಭುಪ್ರಸಾದ್ ಎನ್. ಜಿ., ಶೃಂಗೇರಿ