Saturday, May 28, 2011

ಸಮಾಧಾನದಿಂದ ಸಾರ್ಥಕತೆ

ಮನುಜರ ಮನಸ್ಸು ತಮಗೆ ದೊರಕಿದುದರಲ್ಲಿ ತೃಪ್ತಿ ಹೊಂದುವುದಿಲ್ಲ. ಮತ್ತೊಬ್ಬರು ತಮಗಿಂತ ಅದೃಷ್ಟಶಾಲಿಗಳೆಂದೂ, ತಮಗೆ ಅವರಿಗೆ ಲಭಿಸಿದ ಭಾಗ್ಯವು ದೊರಕಿಲ್ಲವೆಂದೂ ಸದಾ ಚಿಂತಿಸುತ್ತಿರುತ್ತದೆ. ಇದು ಅತೃಪ್ತಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಇತರರ ಸಿರಿಗಾಗಿ ಕೊರಗದೇ ನಮ್ಮ ಪ್ರಾಪ್ತಿಯಲ್ಲಿಯೇ ಸಮಾಧಾನ ಹೊಂದುವುದು ಆನಂದಮಯ ಜೀವನವನ್ನು ನೆಡೆಸಲು ಸಹಾಯಕವಾಗಿದೆ. ಇದರರ್ಥ, ಆಲಸಿಗಳಾಗಿ ಸುಮ್ಮನೆ ಕಾಲಕಳೆಯಬೇಕೆಂದಲ್ಲ; ಬದಲಾಗಿ ನಮ್ಮಲ್ಲಿನ ಕುಂದು-ಕೊರತೆಗಳನ್ನು ಗುರುತಿಸಿಕೊಂಡು ಅದನ್ನು ಮೀರಿಸಾಗಿ, ನಮ್ಮನ್ನು ನಾವು ದಿನೇ ದಿನೇ ಉತ್ತಮಪಡಿಸಿಕೊಳ್ಳಬೇಕು ಎಂಬುದಾಗಿದೆ. ಆದರೆ ನಮ್ಮಲ್ಲಿ ಈ ದಿವ್ಯ ಪರಿವರ್ತನೆಯಾಗಲು ನಮ್ಮ ಮನಸ್ಸು ಶಾಂತಸ್ಥಿತಿಯಲ್ಲಿರಬೇಕು.

“ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಯಶಸ್ಸಿನ ಹಿಂದೆ ಸೋಲಿನಿಂದ ಕೂಡಿದ ಅನೇಕ ವರ್ಷಗಳಿರುತ್ತವೆ”ಯೆಂದು ಆಂಗ್ಲ ದಾರ್ಶನಿಕರೊಬ್ಬರು ಹೇಳಿದ್ದಾರೆ. ಅಂದರೆ ಜೀವನದಲ್ಲಿ ಯಶಸ್ಸು ಒಂದು ಆಕಸ್ಮಿಕ ಘಟನೆಯಲ್ಲ; ಅದನ್ನು ಸಾಧಿಸಲು ಸಮಾಧಾನಪೂರ್ವಕವಾದ ಸತತಪ್ರಯತ್ನದ ಅಗತ್ಯವಿದೆ. ನಮಗೆದುರಾಗುವ ಸೋಲುಗಳಿಂದ ಕಂಗೆಡದೇ, ಅವುಗಳಿಂದಲೇ ಪಾಠ ಕಲಿಯುತ್ತಾ ಮುನ್ನಡೆಯಬೇಕು. ಇತರರೊಡನೆ ನಮ್ಮನ್ನು ಹೋಲಿಸಿಕೊಂಡು ನಮ್ಮ ಬಗ್ಗೆ ನಾವು ಕೀಳುರಿಮೆ ಹೊಂದಬಾರದು. ಪ್ರತಿಯೊಬ್ಬರ ಸಾಮರ್ಥ್ಯ, ಆಸಕ್ತಿ, ಗುರಿ ಹಾಗೂ ಎದುರಾಗುವ ಸನ್ನಿವೇಶಗಳೇ ಬೇರೆ ಬೇರೆಯಾಗಿರುತ್ತದೆಯೆಂಬ ಅಂಶವನ್ನು ಮೊದಲು ಮನಗಾಣಬೇಕು. ಆಗ ಸಮಾಧಾನವು ನಮ್ಮಲ್ಲಿ ನೆಲೆಗೊಂಡು ನಮ್ಮ ಗುರಿಯೆಡೆಗಿನ ಪಯಣ ಸುಗಮವಾಗುತ್ತದೆ. ನಾನು ಕೆಲಸಕ್ಕೆ ಸೇರಿದ ಪ್ರಾರಂಭಿಕ ದಿನಗಳಲ್ಲಿ ನಮ್ಮ ಮಾರ್ಗದರ್ಶಕರೊಬ್ಬರು ಹೀಗೆ ಹೇಳುತ್ತಿದ್ದರು: “ಯಶಸ್ಸು, ಭಡ್ತಿ, ವೇತನದಲ್ಲಿ ಹೆಚ್ಚಳ ಮೊದಲಾದವುಗಳು ಬಸ್ಸುಗಳಿದ್ದಂತೆ. ಎಲ್ಲರೂ ಅವರವರ ಗಮ್ಯಸ್ಥಾನಕ್ಕೆ ಸೇರಲು ನಿಲ್ದಾಣದಲ್ಲಿ ಕಾದುಕುಳಿತಿದ್ದೇವೆ. ಅವರವರ ಬಸ್ಸು ಬಂದೊಡನೆ ಅವರು ಅದನ್ನೇರಿ ಸಾಗುತ್ತಾರೆ. ಒಂದು ವೇಳೆ ನಮ್ಮ ಬಸ್ಸು ತಪ್ಪಿಹೋದರೂ, ಅದೇ ಕೊನೆಯಲ್ಲ. ಇನ್ನೊಂದು ಬಸ್ಸು ಬರುವವರೆಗೂ ಕಾಯಬೇಕು. ನಮಗಿಂತ ಮೊದಲೇ ಬಸ್ಸನ್ನು ಹತ್ತಿಹೋದವರೊಡನೆ ನಮ್ಮನ್ನು ಹೋಲಿಸಿಕೊಂಡು ಹತಾಶರಾಗುವುದು ಬೇಡ. ನಮ್ಮ ಬಸ್ಸೂ ಬಂದೇ ಬರುತ್ತದೆ. ಅದು ಬರುವವರೆಗೂ ಸಮಾಧಾನವಿರಲಿ.” ಇದೊಂದು ಸಾರ್ವಕಾಲಿಕ ಸತ್ಯವೇ ಸರಿ. ಅಲ್ಲವೇ?

ಇದಿಷ್ಟೂ ಲೌಕಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದಾದರೆ ಆಧ್ಯಾತ್ಮಿಕ ಜೀವನದ ಹಾದಿಯು ಇನ್ನೂ ಆಸಕ್ತಿದಾಯಕವಾದದ್ದು. ಸಾಮಾನ್ಯ ಮನುಜರಿಗೆ ಆಧ್ಯಾತ್ಮಿಕತೆಯೆಡೆಗಿನ ತುಡಿತ ಮೇಲ್ಪದರದಲ್ಲಿ ಕಂಡುಬರುವುದಿಲ್ಲ. ಆದರೆ ಅದು ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅವರಿನ್ನೂ ವಿಷಯಾಸಕ್ತಿಯ ಸುಳಿಯಲ್ಲಿ ಸಿಕ್ಕಿ ಸಂಪತ್ತು, ಅಧಿಕಾರ, ವರ್ಚಸ್ಸುಗಳ ಹುಡುಕಾಟದಲ್ಲಿರುತ್ತಾರೆ. ಅದು ಲಭಿಸಿ ಯಶಸ್ಸಿನ ತುತ್ತತುದಿಗೇರಿದಾಗ ಶೂನ್ಯವು ಕಾಡತೊಡಗುತ್ತದೆ. ಇದಾವುದೂ ಶಾಶ್ವತವಲ್ಲ; ಇವುಗಳನ್ನು ಮೀರಿದ ಆನಂದದಲ್ಲಿ ಮುಳುಗಿಹೋಗಬೇಕೆಂಬ ಕರೆ ಅಂತರಾಳದಲ್ಲಿ ಮೂಡುತ್ತದೆ. ಆದರೆ ಅವರು ಆ ಕರೆಯನ್ನು ಮರೆತು ಮತ್ತೆ ಬದುಕಿನ ಜಂಜಾಟದಲ್ಲಿ ತಾವಾಗಿಯೇ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. ಆದರೆ ಬುದ್ಧಿವಂತರು ಈ ಎಲ್ಲಾ ಲೌಕಿಕ ವಸ್ತುಗಳು ಹಾಗೂ ಸುಖಭೋಗಗಳ ಅಶಾಶ್ವತೆ ಮತ್ತು ಅವುಗಳು ದೂರವಾದಾಗ ಉಂಟಾಗುವ ದುಃಖದ ಬಗ್ಗೆ ಆಳವಾಗಿ ಆಲೋಚಿಸಿ ಶಾಶ್ವತವಾಗಿ ನಮ್ಮೊಡನಿರುವ ಪರಮಾನಂದವನ್ನೇ ಆರಿಸಿಕೊಳ್ಳುತ್ತಾರೆ.

ಪ್ರಪಂಚದಲ್ಲಿರುವ ಪ್ರತಿಯೊಂದೂ ಪರಿಪೂರ್ಣತೆಯೆಡೆಗೆ ತುಡಿಯುತ್ತಿರುತ್ತದೆ. ಎಲ್ಲರೂ ಇಲ್ಲಿ ಪರಿಪೂರ್ಣರೇ. ಆದರೆ ನಮಗದರ ಅರಿವಿಲ್ಲ. ಒಬ್ಬನೇ ಸೂರ್ಯನ ಪ್ರತಿಬಿಂಬವು ಶಾಂತಸರೋವರದಲ್ಲಿ, ಸಗಣಿ ನೀರಿನಲ್ಲಿ ಹಾಗೂ ಇನ್ನೊಂದೆಡೆಯಲ್ಲಿಯೂ ಪ್ರಕಾಶಿಸುತ್ತಿದ್ದರೂ ಮೂಲವು ಒಂದೇ ಆಗಿರುತ್ತದೆ; ಅದರಲ್ಲಾವ ನ್ಯೂನ್ಯತೆಯೂ ಇಲ್ಲ. ಇದೇ ರೀತಿ ಪರಬ್ರಹ್ಮವಸ್ತುವು ಜಗದ ಎಲ್ಲ ಚರಾಚರಗಳಲ್ಲಿಯೂ ವ್ಯಕ್ತವಾಗಿ ನಾನಾರೂಪಗಳಲ್ಲಿ ವಿರಾಜಿಸುತ್ತಿದೆ. ನಮಗೆ ಅದರ ಅರಿವಿಲ್ಲದಿದ್ದರೂ ನಾವುಗಳೂ ಸಹಾ ಅದರ ಅಭಿವ್ಯಕ್ತಿಯೇ ಆಗಿರುತ್ತೇವೆ. ಆದ್ದರಿಂದಲೇ ಉಪನಿಷತ್ತುಗಳು ನಮ್ಮನ್ನು ’ಅಮೃತಪುತ್ರ’ರೆಂದೇ ಸಂಬೋಧಿಸುತ್ತವೆ. ನಾವು ಮಾಡುವ ತಪ್ಪುಗಳಿಂದ ನಮ್ಮಲ್ಲಿ ಕೀಳುರಿಮೆ ಮೂಡದಿರಲಿ. ಬದಲಾಗಿ ನಾವು ಅವುಗಳನ್ನು ಗುರುತಿಸಿ, ಸರಿಪಡಿಸಿಕೊಂಡು ನಮ್ಮ ಪಯಣವನ್ನು ಮುಂದುವರೆಸೋಣ. ’ಮನುಜರು ಮಿಥ್ಯೆಯಿಂದ ಸತ್ಯದೆಡೆಗೆ ಸಾಗುತ್ತಿಲ್ಲ. ಬದಲಾಗಿ ಸತ್ಯದಿಂದ ಉನ್ನತ ಸತ್ಯದೆಡೆಗೆ ಸಾಗುತ್ತಿದ್ದಾರೆ’ ಎಂಬ ಸ್ವಾಮಿ ವಿವೇಕಾನಂದರ ಕಿಡಿನುಡಿಗಳೂ ಸಹಾ ಇದೇ ಅಂಶವನ್ನು ಸಾರುತ್ತಿವೆ. ಇದರ ಬಗ್ಗೆ ನಾವು ಧ್ಯಾನಿಸಿ, ಅನುಷ್ಠಾನಗೊಳಿಸುವ ಮನಮಾಡಿದಾಗ, ಸಮಾಧಾನವು ಮನದಲ್ಲಿ ನೆಲೆಗೊಂಡು ಸಾರ್ಥಕ ಬಾಳ್ವೆ ನೆಡೆಸುವ ಭಾಗ್ಯ ನಮ್ಮದಾಗುತ್ತದೆ.

ಶಾಂತವಾಗಿ ಉರಿಯುತ್ತಿರುವ ದೀಪವು ಎಲ್ಲೆಡೆಗೂ ತನ್ನ ಬೆಳಕನ್ನು ಪಸರಿಸುವಂತೆ, ಸಮಾಧಾನಚಿತ್ತನಾಗಿರುವ ವ್ಯಕ್ತಿಯು ತನ್ನ ಸುತ್ತಲೂ ಪ್ರಶಾಂತ ಪ್ರಭಾವಲಯವನ್ನು ನಿರ್ಮಿಸಿಕೊಂಡಿರುತ್ತಾನೆ. ನಾವು ಅದರ ಸಂಪರ್ಕಕ್ಕೆ ಬಂದಾಗ ನಮ್ಮಲ್ಲೂ ಅದರ ಪ್ರಭಾವವುಂಟಾಗಿ ಧನ್ಯರಾಗುವುದು ನಿಶ್ಚಿತ. ಆದ್ದರಿಂದಲೇ ಆಧ್ಯಾತ್ಮಿಕ ಸಾಧನೆಯಲ್ಲಿ ಸತ್ಸಂಗ, ಗುರುಸೇವೆಗಳಿಗೆ ವಿಶೇಷವಾದ ಮಹತ್ವವಿದೆ. ಈ ದಿವ್ಯಪ್ರಭೆಯಲ್ಲಿ ಮಿಂದು ಪುನೀತವಾದ ಏಕಾಗ್ರಚಿತ್ತ ಮನಸ್ಸು ಗುರಿಯೆಡೆಗಿನ ಸಾಧನೆಗೆ ಸಹಾಯವನ್ನೊದಗಿಸುತ್ತದೆ.

ಹೀಗೆ ಶಾಂತಿ-ಸಮಾಧಾನಗಳಿಂದ ಬದುಕಲಾರಂಭಿಸಿದಾಗ, ಅನರ್ಥಕಾರಿಯಾದ ’ಅಹಂ’ಭಾವವು ನಶಿಸುತ್ತಾ ಹೋಗಿ ’ಅಕರ್ತ’ತ್ವವು ನೆಲೆಗೊಳ್ಳುತ್ತದೆ. ಅಕರ್ತೃತ್ವವು ಯಾವುದೇ ಕೆಲಸ ಮಾಡದೇ ಉದಾಸೀನ ಭಾವದಲ್ಲಿ ಜಡವಾಗಿರುವುದಲ್ಲ; ಬದಲಾಗಿ ಫಲಾಕಾಂಕ್ಷೆಯಿಲ್ಲದೇ ಅಸ್ತಿತ್ವವು ತನ್ನ ಮೂಲಕ ಈ ಕೆಲಸವನ್ನು ಮಾಡಿಸುತ್ತಿದೆಯೆಂಬ ’ಸಾಕ್ಷಿ’ಭಾವವಾಗಿರುತ್ತದೆ. ಈ ರೀತಿ ಬದುಕಿ ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ಜೀವನ್ಮುಕ್ತರನ್ನು ಪರಮಾತ್ಮನು ಮುಕ್ತಕಂಠದಿಂದ ಹೀಗೆ ಶ್ಲಾಘಿಸಿದ್ದಾನೆ:

ಬ್ರಹ್ಮಣ್ಯಾಧ್ಯಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ|

ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ||

[ಗೀತಾ, ೫:೧೦]

“ಪ್ರಪಂಚದ ನಡುವೆ ಕಾರ್ಯಗಳನ್ನು ನಿರ್ವಹಿಸುತ್ತಾ, ಅವುಗಳ ಫಲಾಫಲಗಳನ್ನು ಪರಮಾತ್ಮನಿಗರ್ಪಿಸಿ ಬದುಕುವವನಿಗೆ, ಹೇಗೆ ನೀರಿನಲ್ಲಿಯೇ ಹುಟ್ಟಿ ಬೆಳೆದರೂ ಕಮಲಕ್ಕೆ ನೀರು ಅಂಟುವುದಿಲ್ಲವೋ, ಹಾಗೆಯೇ ಲೋಕದ ಪಾಪಗಳೂ ಬಾಧಿಸಲಾರವು.”

ಲೌಕಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಮಾಧಾನದ ಪಾತ್ರವು ಮಹತ್ವದ್ದಾಗಿದೆ. ಸಾರ್ಥಕ ಜೀವನ ನೆಡೆಸಲು ಇದು ಅತ್ಯಾವಶ್ಯಕವಾಗಿದೆ. ನಾವೆಲ್ಲರೂ ಈ ಅಂಶವನ್ನು ಮನಗಂಡು, ಆಚರೆಣೆಗೆ ತಂದಾಗ ಆನಂದಮಯ ಜೀವನವು ನಮ್ಮದಾಗುವುದರಲ್ಲಿ ಸಂದೇಹವಿಲ್ಲ.

0 comments:

Post a Comment